ವಲಸೆ ಕಾರ್ಮಿಕರಿಗೆ ಪರ್ಯಾಯ ಆಶ್ರಯದ ವ್ಯವಸ್ಥೆ ಕಲ್ಪಿಸಲು ಉಡುಪಿ ಡಿಸಿಗೆ ಮನವಿ

ಉಡುಪಿ, ಮೇ 14: ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ವಲಸೆ ಬರುವ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಪರ್ಯಾಯ ಆಶ್ರಯದ ವ್ಯವಸ್ಥೆ ಮಾಡಲು ಆಗ್ರಹಿಸಿ ಸಿಐಟಿಯು ನಿಯೋಗ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಿತು.
ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಹಲವಾರು ವರ್ಷಗಳಿಂದ ಆಶ್ರಯ ಪಡೆದಿದ್ದ ವಲಸೆ ಕಾರ್ಮಿಕರನ್ನು ಇತ್ತೀಚೆಗೆ ಸ್ಥಳೀಯ ಆಡಳಿತ ಪರ್ಯಾಯ ವ್ಯವಸ್ಥೆ ಮಾಡದೇ ಬಲಾತ್ಕಾರವಾಗಿ ತೆರವುಗೊಳಿಸಿ ಅವ ರನ್ನು ಅತಂತ್ರ ಗೊಳಿಸಿದೆ. ಈ ವಲಸೆ ಕಾರ್ಮಿಕರಿಗೆ ಖಾಯಂ ಉದ್ಯೋಗದಾತರಿಲ್ಲ. ದಿನಕ್ಕೊಂದು ಮಾಲಕರು ಇವರನ್ನು ಕೆಲಸಕ್ಕೆ ನಿಯೋಜಿಸಿ ವೇತನ ನೀಡುತ್ತಾರೆ. ಇವರಿಗೆ ಆಶ್ರಯ ಕಲ್ಪಿಸಲು ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸರಕಾರಕ್ಕೆ ಕಳುಹಿಸ ಬೇಕು ಎಂದು ಮನವಿ ಮಾಡಲಾಯಿತು.
ಈ ವೇಳೆ ಹಾಜರಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಜಿಲ್ಲಾಧಿಕಾರಿಗಳು, ಈ ಕುರಿತು ಕಾರ್ಮಿಕ ಆಯುಕ್ತರಿಗೆ ಪ್ರಸ್ತಾವನೆ ಕಳುಹಿಸಿ ವಲಸೆ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. ಈಗಾಗಲೇ ಅಜ್ಜಂಪುರದಲ್ಲಿ ವಲಸೆ ಕಾರ್ಮಿಕರಿಗೆ ಭೂಮಿ ಮೀಸಲಿರಿಸಿದರೂ ಕಾಮಗಾರಿ ನಡೆದಿಲ್ಲ ಎಂದರು. ಈ ಬಗ್ಗೆ ಜಿಲ್ಲಾ ಕೇಂದ್ರದ ಒಂದೇ ಕಡೆಯಲ್ಲಿ ವಸತಿ ನೀಡಿದರೆ ಪ್ರಯೋಜನವಿಲ್ಲ. ಬದಲಾಗಿ ಜಿಲ್ಲೆಯಲ್ಲಿ ತಾಲೂಕುವಾರು ವಸತಿಗಳನ್ನು ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸ ಲಾಯಿತು.
ವಲಸೆ ಕಾರ್ಮಿಕರನ್ನು ಅಸ್ಪ್ರಶ್ಯರಂತೆ ಕಾಣುವುದು ನಿಲ್ಲಿಸಬೇಕು. ಅತಿಥಿ ಕಾರ್ಮಿಕರಂತೆ ಅವರನ್ನು ಗೌರವಿಸಬೇಕು. ಎಲ್ಲಾ ಕಾರ್ಮಿಕರಲ್ಲಿ ಕೆಲವರು ಕೆಟ್ಟವರು ಇರುತ್ತಾರೆ. ಅಂತವರಿಗೆ ಕಾನೂನು ಮೂಲಕ ಅರಿವು ಮೂಡಿಸಬೇಕು ಎಂದು ಸಿಐಟಿಯು ತಿಳಿಸಿದೆ.
ನಿಯೋಗದಲ್ಲಿ ಕರ್ನಾಟಕ ರಾಜ್ಯ ವಲಸೆ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬೈಂದೂರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಉಪಸ್ಥಿತರಿದ್ದರು.