ಕಾಪು: ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ

ಉಡುಪಿ, ಮೇ 14: ಜಿಲ್ಲಾಡಳಿತ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಹಾಗೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ - ಕೇರಳ ಇವರ ಸಂಯುಕ್ತ ಆಶ್ರಯದಲ್ಲಿ ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ ಪೆರ್ನಾಲಿನ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಪ್ರಾರಂಭಗೊಂಡಿದೆ.
ಕಾಪು ತಾಲೂಕು ತಹಶೀಲ್ದಾರ್ ಪ್ರತಿಭಾ ಆರ್ ಅವರು ಗಿಡ ನೆಡುವ ಮೂಲಕ ಹಾಗೂ ಡೋಲು ಬಾರಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಶಿಬಿರಕ್ಕೆ ಶುಭಕೋರಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪರಿಸರ ಶಿಕ್ಷಕಿ ದೀಪ್ತಿ ಪ್ರಾತ್ಯಕ್ಷಿಕೆ ಮೂಲಕ ಪರಿಸರ ಚಟುವಟಿಕೆ ವಿಷಯದ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪರಿಸರ, ಅದರ ರಕ್ಷಣೆ ಕುರಿತಂತೆ ವಿವರಿಸಿದ ದೀಪ್ತಿ, ಮಕ್ಕಳಿಗೂ ಪರಿಸರದ ಕುರಿತಂತೆ ಕಾಳಜಿ ವಹಿಸುವಂತೆ ಪ್ರೇರೇಪಿಸಿದರಲ್ಲದೇ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಹಾಗೂ ಸಂಯೋಜಕರಾದ ಪುತ್ರನ್ ಹೆಬ್ರಿ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಪ್ಪ ಬಂಬಿಲ, ದೀಪ್ತಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳ ಪ್ರತಿನಿಧಿಗಳಾಗಿ ಹರಿಣಾಕ್ಷಿ ಮತ್ತು ನಿಶಾಂತ್ ಇದ್ದರು.
ಶಿಬಿರಾರ್ಥಿ ವಲ್ಮ ಅತಿಥಿಗಳನ್ನು ಸ್ವಾಗತಿಸಿದರೆ, ಸಮುದಾಯ ಕಾರ್ಯಕರ್ತ ರಾದ ಸುಪ್ರಿಯಾ ಎಸ್. ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ಬಂಬಿಲ ಹಾಗೂ ತಂಡ ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆ, ಆಟಗಳ ಮೂಲಕ ವಿವಿಧ ವಿಷಯಗಳನ್ನು ಮನದಟ್ಟು ಮಾಡಿತು. ಮಕ್ಕಳಲ್ಲಿ ನಾಯಕತ್ವ ಮನೋಭಾವ ಬೆಳೆಸುವ ಹಲವು ಚಟುವಟಿಕೆಗಳನ್ನು ಕಲಿಸಲಾಯಿತು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ, ಸಮುದಾಯದ ಪರಿಚಯವನ್ನು ಮಾಡಿಸುವ ಜೊತೆಗೆ ಸಮಸ್ಯೆಗಳು ಎದುರಾದಾಗ ಹೇಗೆ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು. ಉಮೇಶ್ ಮಕ್ಕಳಿಗೆ ಸುಲಭ ವಿಧಾನದಲ್ಲಿ ಚಿತ್ರ ಬಿಡಿಸುವುದನ್ನು ಹೇಳಿಕೊಟ್ಟರು.
ಕೃಷ್ಣಪ್ಪ ಬಂಬಿಲ ಹಾಗೂ ತಂಡ ರಂಗ ತರಬೇತಿಯನ್ನು ನೀಡಿತು. ಹಾಡು, ಅಭಿನಯಗಳ ಮೂಲಕ ಮಕ್ಕಳಿಗೆ ನಟನೆಯ ವಿವಿಧ ಮುಖಗಳನ್ನು ಪರಿಚಯಿಸಲಾಯಿತು. ಶಿಬಿರ ಒಟ್ಟು ಐದು ದಿನಗಳ ಕಾಲ ನಡೆಯಲಿದೆ.