ಶಿಕ್ಷಣ ಪಡೆದು ಮಾದರಿ ಜೀವನ ಕಟ್ಟಿಕೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
ಪೆರ್ನಾಲು ಆಶ್ರಮದಲ್ಲಿ ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ

ಶಿರ್ವ, ಮೇ 16: ಮಕ್ಕಳು ಸಮಾಜದಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆದು ಕೊಂಡು ಮಾದರಿಯಾಗಿ ಜೀವನ ಕಟ್ಟಿಕೊಳ್ಳಬೇಕು. ಅವಕಾಶಗಳನ್ನು ಉಪಯೋಗಿಸಿಕೊಂಡು, ಬದುಕಿನ ಗುರಿಯನ್ನು ತಲುಪಲು ಇಂತಹ ಶಿಬಿರಗಳಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳಬೇಕು. ಆ ಮೂಲಕ ಮಕ್ಕಲು ತಮ್ಮ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದ್ದಾರೆ.
ಜಿಲ್ಲಾಡಳಿತ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಹಾಗೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಇವರ ಸಂಯುಕ್ತ ಆಶ್ರಯದಲ್ಲಿ ಪೆರ್ನಾಲು ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ ಮೂರನೇ ದಿನವಾದ ಗುರುವಾರ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಯಾವೆಲ್ಲ ರೀತಿಯ ಚಟಗಳು ಮನುಷ್ಯನ ಬದುಕನ್ನು ಅಂತ್ಯಗೊಳಿಸುತ್ತದೆ, ಹದಿಹರೆಯದ ಸಮಸ್ಯೆಗಳು ಯಾವುದು? ಎಂಬ 5 ಸೂತ್ರಗಳನ್ನು ಇಟ್ಟುಕೊಂಡು ಜೀವನದಲ್ಲಿ ಸಾಧನೆ ಮಾಡುವ ವಿಧಾನ ಹಾಗೂ ಅವುಗಳನ್ನು ಸಾಧಿಸು ವತ್ತ ಗಮನಹರಿಸಬೇಕು ಎಂಬುದನ್ನು ತಿಳಿಸಿದರು
ಕೃಷ್ಣಪ್ಪಬಂಬಿಲ ನಾಟಕ ಹಾಗೂ ಸುನಿಲ್ ಕಾರ್ಕಳ ನೃತ್ಯ ಕುರಿತು ತರಬೇತಿ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ಇಂಗ್ಲಿಷ್ ವ್ಯಾಕಾರಣಕ್ಕೆ ಸಂಬಂಧಿಸಿದ ತರಗತಿ ನಡೆಸಿಕೊಟ್ಟರು. ಶಿಬಿರಾರ್ಥಿ ವಲ್ಮ ಅಧ್ಯಕ್ಷತೆ ವಹಿಸಿದ್ದರು. ಹೇಮಂತ್ ಸ್ವಾಗತಿಸಿದರು. ನೀರಜ್ ವಂದಿಸಿದರು. ಸೌಜನ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದ ಉದ್ಘಾಟನೆ: ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಗಿಡ ನೆಡುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಯೋಜಕ ಪುತ್ರನ್ ಹೆಬ್ರಿ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಪ್ಪ ಬಂಬಿಲ ಹಾಗೂ ದೀಪ್ತಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳ ಪ್ರತಿನಿಧಿಗಳಾಗಿ ಹರಿಣಾಕ್ಷಿ ಮತ್ತು ನಿಶಾಂತ್ ಹಾಜರಿದ್ದರು. ಶಿಬಿರಾರ್ಥಿ ವಲ್ಮ ಸ್ವಾಗತಿಸಿದರೆ ಸಮುದಾಯ ಕಾರ್ಯಕರ್ತೆ ಸುಪ್ರಿಯಾ ಎಸ್. ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿದರು.







