ಯೋಜನೆಗಳಿಂದ ರೈತರ ಬದಲು ಅಧಿಕಾರಿಗಳಿಗೆ ಅನುಕೂಲ: ಎಸ್.ಪ್ರಕಾಶ್ಚಂದ್ರ ಶೆಟ್ಟಿ
ಬೈಂದೂರು: ಏತ ನೀರಾವರಿ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಬೈಂದೂರು, ಮೇ 16: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 72 ಕೋಟಿ ರೂ. ಅನುದಾನದ ಗುಡೇ ದೇವಸ್ಥಾನ ಏತ ನೀರಾವರಿ ಜಾಕ್ವೆಲ್ ಕಾಮಗಾರಿ ವಿರೋಧಿಸಿ ಗುಡೇ ಮಹಾಲಿಂಗೇಶ್ವರ ಏತನೀರಾವರಿ ಸಂತ್ರಸ್ಥ ರೈತರ ಒಕ್ಕೂಟ ಹೆರಂಜಾಲು, ಹಳಗೇರಿ, ನೂಜಾಡಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅವೈಜ್ಞಾನಿಕವಾಗಿರುವ ಈ ಕಾಮಗಾರಿಯನ್ನು ಕೂಡಲೇ ಸ್ಥಳಾಂತರ ಮಾಡ ಬೇಕೆಂದು ಆಗ್ರಹಿಸಿ ಗ್ರಾಮಸ್ಥರು ನೀರಿನ ಕೊಡ ಹಿಡಿದುಕೊಂಡು ಬೈಂದೂರಿನ ಸೇನೇಶ್ವರ ದೇವಸ್ಥಾನದಿಂದ ಆಡಳಿತ ಸೌಧದವರೆಗಿನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೈಂದೂರು ಆಡಳಿತ ಸೌಧದ ಎದುರು ತಹಶೀಲ್ದಾರ್ ಭೀಮಸೇನ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ರೈತ ಸಂಘದ ಖಂಬದಕೋಣೆ ವಲಯ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಯೋಜನೆಗಳು ರೈತರಿಗೆ ಅನುಕೂಲವಾಗುವ ಬದಲು ಗುತ್ತಿಗೆ ದಾರರು ಮತ್ತು ಅಧಿಕಾರಿಗಳ ಹಿತಾಸಕ್ತಿಗೆ ಮೀಸಲಿರಿಸಿದೆ. ಉಡುಪಿ ಜಿಲ್ಲೆಯ 400 ಕೋಟಿಗೂ ಅಧಿಕ ಅನುದಾನದಲ್ಲಿ ಈ ಇಲಾಖೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ ಫಲಾನುಭವಿ ಗಳು, ರೈತರು ಹೊರತುಪಡಿಸಿ ಉಳಿದೆಲ್ಲ ಕೆಲ ಚುನಾಯಿತ ಪ್ರತಿನಿಧಿಗಳು ಫಲಾನುಭವಿಗಳಾಗಿದ್ದಾರೆ. ಈ ಮೂಲಕ ಸರಕಾರದ ಹಣ ಲೂಟಿಯಾಗುತ್ತಿದೆ ಎಂದು ಆರೋಪಿಸಿದರು.
ಬೈಂದೂರು ಕ್ಷೇತ್ರದಲ್ಲಿ ಯಾವುದೇ ವೆಂಟೆಂಡ್ ಡ್ಯಾಮ್‌ಗಳು ರೈತರಿಗೆ ರೈತರಿಗೆ ಅನುಕೂಲವಾಗಿಲ್ಲ. ಮಾತ್ರವಲ್ಲದೆ ಉದ್ದೇಶಿತ ಏತ ನೀರಾವರಿ ಯೋಜನೆ ಕೂಡ ಸಾಕಾರಗೊಂಡಿಲ್ಲ. ಸುಬ್ಬರಾಡಿ ಯೋಜನೆ ಸಾಕಾರ ಗೊಂಡಿಲ್ಲ. ಇದರಿಂದ ಈ ಭಾಗದ ರೈತರಿಗೆ ಅನ್ಯಾಯವಾದರೆ ಅಧಿಕಾರಿಗಳೆ ನೇರ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.
ಉಡುಪಿ ಜಿಲ್ಲಾ ರೈತ ಸಂಘದ ವಂಡ್ಸೆ ವಲಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಮಾತ ನಾಡಿ, ಉಡುಪಿ ಜಿಲ್ಲಾ ರೈತ ಸಂಘ ದಶಕಗಳಿಂದ ರೈತರ ಪರವಾಗಿ ಹೋರಾಡುತ್ತಿದೆ. ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದನೆ ಮಾಡದಿರುವುದು ದುರದೃಷ್ಟಕರ. ಸರಕಾರದ ಮಹತ್ವಕಾಂಕ್ಷಿ ಯೋಜನೆಗಳು, ಸರಕಾರದ ಅನುದಾನ ಅಧಿಕಾರಿಗಳ ಬೇಜಬ್ದಾರಿ, ನಿರ್ಲಕ್ಷ್ಯದಿಂದ ಪ್ರಯೋಜನವಿಲ್ಲ ದಂತಾಗಿದೆ. ಈ ಅವೈಜ್ಞಾನಿಕ ಕಾಮಗಾರಿಯಯಿಂದಾಗಿ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಗೊಂದಲಗಳಿಂದ ಯಾವುದೇ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ರೈತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಸಮೀಕ್ಷೆ ನಡೆಸಿ, ಚರ್ಚೆ ನಡೆಸಿ ಯೋಜನೆ ನಡೆಸಬೇಕಾಗಿದೆ. ಇಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆ ಹೋರಾಟವೇ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತ್ರಸ್ತ ರೈತರ ಒಕ್ಕೂಟದ ಅಧ್ಯಕ್ಷೆ ಜಯಂತಿ ಐತಾಳ್, ಜಿಲ್ಲಾ ರೈತ ಸಂಘದ ಪ್ರತಿನಿಧಿ ಉದಯ ಕುಮಾರ್ ಶೆಟ್ಟಿ ವಂಡ್ಸೆ, ಶರತ್ ಶೆಟ್ಟಿ, ಹೋರಾಟದ ಪ್ರಮುಖರಾದ ರಾಘವೇಂದ್ರ ಹೇರಂಜಾಲು, ವೇದನಾಥ ಶೆಟ್ಟಿ ಹೇರಂಜಾಲು, ಕೃಷ್ಣ ಪೂಜಾರಿ, ಮಣಿರಾಜ್, ಕೃಷ್ಣ, ಸುಬ್ರಹ್ಮಣ್ಯ ಬಿಜೂರು, ರೈತ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.
‘ಅನಗತ್ಯ ವೆಂಟೆಂಡ್ ಡ್ಯಾಂ’
ಬೈಂದೂರು ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಡೆಯುತ್ತಿರುವ ಬಹುತೇಕ ವೆಂಟೆಂಡ್ ಡ್ಯಾಂಗಳು ಗುತ್ತಿಗೆದಾರರ ಹಿತಾಸಕ್ತಿಯಿಂದ ಮಾಡಿರುವಂತಿದೆ. ಗುಡೇ ಮಹಾಲಿಂಗೇಶ್ವರದಲ್ಲಿ 72 ಕೋಟಿ ರೂಪಾಯಿ ಅನುದಾನದಲ್ಲಿ ಏತ ನೀರಾವರಿ ಯೋಜನೆ ನಡೆಯುತ್ತಿದ್ದು 3 ಕಿ.ಮೀ ದಂಡೆ ಹಾಕಿರುವ ಪರಿಣಾಮ ಈ ಭಾಗದ ಸಾವಿರಾರು ಎಕರೆ ನೆಲಗಡಲೆ ಕೃಷಿ ಹಾನಿಯಾಗಿದೆ. ರೈತರ ಬದುಕು ಬೀದಿಗೆ ಬಂದಿದೆ. ಅನ್ಯಾಯವನ್ನು ವಿರೋಧಿಸಿದವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಆದರೆ ಯಾವ ಕಾರಣಕ್ಕೂ ಬೈಂದೂರನ್ನು ಬಳ್ಳಾರಿಯಾಗಲು ಬಿಡಲಾರೆವು ಎಂದು ಎಸ್.ಪ್ರಕಾಶ್ಚಂದ್ರ ಶೆಟ್ಟಿ ತಿಳಿಸಿದರು.







