"ಕಾಪು ಶ್ರೀಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜದ ಕಡೆಗಣನೆ"
ದ.ಕ. ಮೊಗವೀರ ಮಹಾಜನ ಸಂಘದಿಂದ ಖಂಡನೆ

ಕಾಪು: ಕಾಪು ಶ್ರೀಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿ ನಿಧ್ಯ ನೀಡದೆ ಕಡೆಗಣಿಸಿರುವುದನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ತೀವ್ರವಾಗಿ ಖಂಡಿಸಿದೆ.
ಕಾಪು ಶ್ರೀಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದಿನಿಂದಲೂ ಮೊಗವೀರ ಸಮಾಜಕ್ಕೆ ಎರಡು ಪ್ರಾತಿನಿಧ್ಯ ನೀಡಲಾಗುತಿತ್ತು. ಅದರಂತೆ ಈಗಿನ ಸಮಿತಿಯಲ್ಲಿ ಶ್ರೀಧರ್ ಕಾಂಚನ್ ಅವರಿಗೆ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ಶ್ರೀಧರ್ ಕಾಂಚನ್ ಅವರು ಅಕಾಲಿಕವಾಗಿ ದೈವಾಧೀನರಾಗಿದ್ದು, ಅವರ ಸ್ಥಾನಕ್ಕೆ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಬೇರೆ ಸಮಾಜದವರನ್ನು ಆಯ್ಕೆ ಮಾಡಿ, ಕಾಪು ಕ್ಷೇತ್ರದಲ್ಲಿ ಬಹು ಸಂಖ್ಯೆಯಲ್ಲಿರುವ ಮೊಗವೀರ ಸಮಾಜಕ್ಕೆ ಅವಮಾನ ಮಾಡಲಾಗಿದೆ ಎಂದು ಸಂಘ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.
ಮೊಗವೀರ ಸಮಾಜವನ್ನು ಕಡೆಗಣಿಸಿರುವ ಸರಕಾರದ ಸ್ಥಳೀಯ ಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರ ವಿರುದ್ಧ ದ.ಕ.ಮೊಗವೀರ ಮಹಾಜನ ಸಂಘವು ಆಕ್ರೋಶ ವ್ಯಕ್ತಪಡಿಸಿದ್ದು, ಸಮಾಜಕ್ಕೆ ಮಾಡಿದ ಅನ್ಯಾಯ ವನ್ನು ಈ ಕೂಡಲೇ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯದಲ್ಲಿ ಮೊಗವೀರ ಸಮಾಜ ಬಾಂಧವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಅದೇ ರೀತಿ ಈ ಹಿಂದೆ ಕಾಪು ಶ್ರೀಜನಾರ್ಧನ ದೇವಸ್ಥಾನದಲ್ಲಿ ಮೊಗವೀರ ಸಮಾಜದ ಇಬ್ಬರಿಗೆ ಪ್ರಾತಿನಿಧ್ಯವನ್ನೂ ನೀಡಲಾಗುತ್ತಿದ್ದು, ಆದರೆ ಈ ಬಾರಿ ಒಬ್ಬರಿಗೆ ಮಾತ್ರ ಪ್ರಾತಿ ನಿಧ್ಯ ನೀಡಿ, ಅಲ್ಲೂ ತಾರತಮ್ಯ ಮಾಡಿ ಮೊಗವೀರ ಸಮಾಜವು ಧಾರ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಜನಪ್ರತಿನಿಧಿಗಳು ಹಾಗೂ ಸರಕಾರ ಕಡೆಗಣಿಸಲಾಗುತ್ತಿದೆ ಎಂದು ಸಂಘ ಪ್ರಕಟಣೆಯಲ್ಲಿ ದೂರಿದೆ.







