ರಾಜ್ಯ ಮಟ್ಟದ ಅಂತರ್ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧೆ: ಕೆಎಮ್‌ಸಿ ಮಣಿಪಾಲ್ ಪ್ರಥಮ

ಮಂಗಳೂರು: ಸ್ನಾತಕೋತ್ತರ ವೈದ್ಯಕೀಯ ಶಾಸ್ತ್ರ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 4ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧೆ ‘ಕಿಮ್ಸ್ ಪಿ.ಜಿ. ಮೆಡಿಕ್ವಿಜ್-2025ರಲ್ಲಿ ಈ ಸ್ಪರ್ಧಾ ಕೂಟದಲ್ಲಿ ಕೆ.ಎಮ್.ಸಿ. ಮಣಿಪಾಲ್ ತಂಡ ಪ್ರಥಮ ಸ್ಥಾನ ಗಳಿಸಿದೆ.
ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಸ್ಪರ್ಧಾ ಕೂಟದಲ್ಲಿ ಕೆ.ಎಮ್.ಸಿ. ಮಣಿಪಾಲ್ ತಂಡವನ್ನು ಪ್ರತಿನಿಧಿಸಿದ ಡಾ.ಅದಿಥಿ ರಾವ್ ಮತ್ತು ಡಾ. ಸಾಯಿ ಭವಾನಿ ರೆಡ್ಡಿ ತಂಡವು ಪ್ರಥಮ ಸ್ಥಾನ ಗಳಿಸಿತು.
ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಡಾ. ವಿನಾಯಕ್ ಎಸ್.ಕೆ. ಮತ್ತು ಡಾ.ರಾಘವೇಂದ್ರ ಡಿ. ತಂಡವು ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ನಗರದ ಏಜೆ. ವೈದ್ಯಕೀಯ ಕಾಲೇಜಿನ ಡಾ. ವರುಣ್ ಶೆಟ್ಟಿ ಮತ್ತು ಡಾ.ಅಭಿನ್ ರೈ ತಂಡ ಗಳಿಸಿತು. ಇದು ಒಂದು ಕುತೂಹಲಕಾರಿ ಮತ್ತು ರೋಮಾಂಚಕಾರಿ ಸ್ಪರ್ಧೆಯಾಗಿತ್ತು.
ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಮುಹಮ್ಮದ್ ಇಸ್ಮಾಯೀಲ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘‘ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಶೈಕ್ಷಣಿಕ ಜ್ಞಾನವನ್ನು ವೃದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು’’ ಎಂದರು.
ಅವರು ವಿಜೇತರಿಗೆ ಪ್ರಶಸ್ತಿ, ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿ ಅಭಿನಂದಿಸಿದರು.
ವೇದಿಕೆಯಲ್ಲಿ ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಶಹನವಾಜ್ ಮಣಿಪಾಡಿ ಮತ್ತು ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ ಮತ್ತು ಸಲಹಾ ಸಮಿತಿಯ ಸದಸ್ಯ ಡಾ. ಎಂ.ವಿ. ಪ್ರಭು ಉಪಸ್ಥಿತರಿದ್ದರು.
ಅವಿಭಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 28 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.
ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈ ಸ್ವಾಗತಿಸಿದರು.
ಮುಹಮ್ಮದ್ ಶಹಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಎಂ.ವಿ. ಮಲ್ಯ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು.







