ಪಾದೂರು ತೈಲ ಸಂಗ್ರಹಗಾರದ ಮೇಲೆ ಡ್ರೋನ್ ದಾಳಿ; ವಿವಿಧ ಇಲಾಖೆಗಳಿಂದ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನ

ಕಾಪು, ಮೇ 19: ಪಾದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಂಡಿಯನ್ ಸ್ಟೆಥಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್(ತೈಲ ಸಂಗ್ರಹಗಾರ) ಮೇಲೆ ಡ್ರೋನ್ ಮೂಲಕ ಸಿಡಿಮದ್ದು (ಬಾಂಬ್) ದಾಳಿ ಯಾಗಿದ್ದು, ಇದರಿಂದ ಇಬ್ಬರು ಮೃತಪಟ್ಟು 35 ಮಂದಿ ಗಾಯಗೊಂಡಿದ್ದಾರೆ.
ಇದು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್.ಟಿ.ಓ, ಆರೋಗ್ಯ ಇಲಾಖೆ, ಮೆಸ್ಕಾಂ, ಎಸ್.ಡಿ.ಆರ್.ಎಫ್ ತಂಡ, ಗೃಹರಕ್ಷಕ ದಳ, ಐ.ಎಸ್.ಪಿ.ಆರ್.ಎಲ್‌ನ ರಕ್ಷಣಾ ಸಿಬ್ಬಂದಿ ರವಿವಾರ ಸಂಜೆ ನಡೆಸಿರುವ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನದ ಚಿತ್ರಣ.
ಸಂಜೆ 4ಗಂಟೆಗೆ ಈ ಅಣಕು ಕಾರ್ಯಾಚರಣೆ ಆರಂಭಗೊಂಡಿದ್ದು, ಬಾಂಬ್ ಸ್ಪೋಟದಿಂದ ಬೆಂಕಿ ಕಾಣಿಸಿ ಕೊಂಡ ಕಾರಣ ಸೈರನ್ ಮೊಳಗಿ ಎಚ್ಚರಿಕೆ ಗಂಟೆ ಬಾರಿಸಿತು. ಈ ಮಾಹಿತಿ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ನೀಡಲಾಯಿತು. ತೈಲಗಾರದ ಬೆಂಕಿ ನಂದಕ ವಾಹನವು ಕಂಪನಿಯ ಒಳಭಾಗದಲ್ಲಿ ಹಾಗೂ ಅದಾನಿ ಕಂಪೆನಿಯ ಫೈಯರ್ ಇಂಜಿನ್ ಹೊರಭಾಗದ ಬೆಂಕಿ ನಂದಿ ಸುವ ಕಾರ್ಯ ನಡೆಸಿತು. ಇದರಲ್ಲಿ ಕಾರ್ಕಳದ ಅಗ್ನಿ ಶಾಮಕ ವಾಹನ ಕೈಜೋಡಿಸಿತು. ಕಾಪು ಪೊಲೀಸ್ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಳ್ಳಲು ಮುಂದಾದರು.
ಕಂಪನಿಯ ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 35 ಜನರಿಗೆ ತೀವ್ರ ತರಹದ ಹಾಗೂ ಸಾಮಾನ್ಯ ಗಾಯಗಳು ಉಂಟಾಗಿದ್ದು, ಅವರುಗಳನ್ನು ಸ್ಪೋಟಗೊಂಡ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಗಳನ್ನು ಕಂಪನಿಯ ಇತರೆ ಕೆಲಸಗಾರರು ನಡೆಸಿದರು. ಕೂಡಲೇ ಪೊಲೀಸ್ ತಂಡವು ಘಟನಾ ಸ್ಥಳದ ಸುತ್ತಮುತ್ತ ಹಾಗೂ ಇತರೆ ಅಗತ್ಯ ಸ್ಥಳಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನಿರ್ವಹಣೆ ಯನ್ನು ಪರಿಣಾಮಕಾರಿಯಾಗಿ ಮಾಡಿದರು.
ಕಾಪುವಿನ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಒಳಗೊಂಡ ತಂಡವು ಘಟನಾ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ, ಚಿಕಿತ್ಸೆಯ ಆದ್ಯತೆಯ ಮೇಲೆ ಟ್ರೆಬಜಿಂಗ್ ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ಗಳನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಂಬುಲೆನ್ಸ್‌ಗಳ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದರು. ಬಾಂಬ್ ನಿಷ್ಕ್ರೀಯ ದಳದವರು ಶ್ವಾನದೊಂದಿಗೆ ಆಗಮಿಸಿ, ಸ್ಥಳದಲ್ಲಿ ಸಜೀವ ಬಾಂಬ್ ಗಳ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಿತು.
ಕ್ವಿಕ್ ರಿಯಾಕ್ಷನ್ ಫೋರ್ಸ್ ತಂಡದವರು ಆಗಮಿಸಿ, ಸುರಕ್ಷತೆಗೆ ಸನ್ನದ್ಧರಾದರು. ಘಟನೆ ಸಂಭವಿಸಿದ 40 ನಿಮಿಷದ ಒಳಗೆ ಮಂಗಳೂರಿನ ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ, ಗಾಯಾಳುಗಳನ್ನು ಸ್ಥಳಾಂತರದ ಕಾರ್ಯಗಳು ಸೇರಿದಂತೆ ಮತ್ತಿತರ ಪ್ರಥಮ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿತು. ಘಟನಾ ಸ್ಥಳದಲ್ಲಿ ಎರಡು ಜನ ಮರಣ ಸಂಭವಿಸಿದರೆ, 12 ಜನ ಚಿಕಿತ್ಸೆಗಾಗಿ ಕಾಪುವಿನ ಆಸ್ಪತ್ರೆಗೆ ಹಾಗೂ 20 ಜನರನ್ನು ಶಿರ್ವದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಘಟನಾ ಪ್ರದೇಶದ ಹತ್ತಿರದಲ್ಲಿ ವಾಸಿಸುವ ಸಾರ್ವಜನಿಕರನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖೆಯ ತಂಡ ಮುಂದಾಗಿತ್ತು.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಆಗಮಿಸಿ ಪರಿಶೀಲನೆ ನಡೆಸಿದರು. ಸಂಜೆ 5.33ರ ವೇಳೆ ಘಟನಾ ಪರಿಸ್ಥಿತಿಯು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ಬರುವುದರೊಂದಿಗೆ ಅಣುಕು ಪ್ರದರ್ಶನವು ಮುಕ್ತಾಯಗೊಂಡಿತು.
ಒಂಡೆದೆ ಡ್ರೋನ್ ಮೂಲಕ ಸ್ಪೋಟಕಗಳ ಮೂಲಕ ಸ್ಪೋಟ, ಇನ್ನೊಂದೆಡೆ ಬೆಂಕಿ ಅನಾಹುತದ ಸಂದರ್ಭವನ್ನು ಸೃಷ್ಠಿಸಿ ಆಪರೇಷನ್ ಅಭ್ಯಾಸದ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಠಿಸಿ, 270ಕ್ಕೂ ಹೆಚ್ಚು ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಿ.ಎ.ಹೆಗಡೆ, ಸಹಾಯಕ ಕಮೀಷನರ್ ರಶ್ಮಿ ಎಸ್., ಐ.ಎಸ್.ಪಿ.ಆರ್.ಎಲ್‌ನ ಮುಖ್ಯ ಸೈಟ್ ಇನ್‌ಚಾರ್ಜರ್ ಜಿ.ಕೆ ಯುವರಾಜ್, ಕಾಪು ತಹಶೀಲ್ದಾರ್ ಪ್ರತಿಭಾ, ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಜಿಲ್ಲಾ ಆರ್.ಟಿ.ಓ ಅಧಿಕಾರಿ ಎಲ್.ಪಿ ನಾಯಕ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಾಹಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ರಕ್ಷಣೆ ಒದಗಿಸುವುದು ಕಾರ್ಯಾಚರಣೆಯ ಉದ್ದೇಶ: ಡಿಸಿ
ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಆಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನವನ್ನು ನಡೆಸಲಾಗಿದೆ. ವಿಕೋಪ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರಾಣಹಾನಿ ಹಾಗೂ ಆಸ್ತಿ ಹಾನಿ ತಡೆಗಟ್ಟುವುದರ ಜೊತೆಗೆ ರಕ್ಷಣೆ ಒದಗಿಸುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ. ರಕ್ಷಣಾ ಕಾರ್ಯದಲ್ಲಿ ಪ್ರತಿಯೊಂದು ಇಲಾಖೆಗಳು ತಮ್ಮ ಜವಾ ಬ್ದಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದೆ. ಘಟನೆ ನಡೆದ 40 ನಿಮಿಷದ ಒಳಗಾಗಿ ಮಂಗಳೂರಿನ ಎಸ್‌ಡಿಆರ್‌ಎಫ್ ತಂಡವು ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ಕೈಗೊಂಡಿರುವುದು ವಿಶೇಷವಾಗಿತ್ತು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ: 0820-2574802 ಅಥವಾ 1077 ಹಾಗೂ ಪೊಲೀಸ್ ಕಚೇರಿಯ ಸಹಾಯವಾಣಿ ಸಂಖ್ಯೆ: 112(ಕಂಟ್ರೋಲ್ ರೂಂ ನಂಬರ್ 0820-2526444) ಕರೆ ಮಾಡಬಹುದು. ಜಿಲ್ಲೆಯ ಮತ್ತಿತರ ಮುಖ್ಯ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಅಣುಕು ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.







