ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ: ಕೊಚ್ಚಿ ಹೋದ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಬದಿಯ ಮಣ್ಣು!
ಜನಜೀವನ ಅಸ್ತವ್ಯಸ್ತ

ಉಡುಪಿ, ಮೇ 20: ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವದಿಂದ ಭಾರೀ ಗಾಳಿಮಳೆಯಾಗಿದೆ. ನಿರಂತರವಾಗಿ ಸುರಿದ ಮಳೆಯ ಆವಾಂತರದಿಂದ ಉಡುಪಿ ಹಾಗೂ ಮಣಿಪಾಲ ತತ್ತರಿಸಿ ಹೋಗಿದ್ದು, ರಾಷ್ಟ್ರೀಯ ಹೆದ್ದಾರಿ ಬದಿಯ ಮಣ್ಣು ಕೊಚ್ಚಿಕೊಂಡು ಹೋಗಿ ರಸ್ತೆಯಲ್ಲೇ ಹರಿದ ಪರಿಣಾಮ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಉಡುಪಿ, ಕಾರ್ಕಳ, ಕಾಪು, ಪಡುಬಿದ್ರೆ, ಕುಂದಾಪುರ, ಬೈಂದೂರು ಸೇರಿದಂತೆ ಹಲವು ಭಾಗಗಳಲ್ಲಿ ಇಂದು ಬೆಳಗ್ಗೆಯಿಂದ ಉತ್ತಮ ಮಳೆಯಾಗಿದೆ. ಮಳೆಯಿಂದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ಸೃಷ್ಠಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಮಳೆ ನೀರು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೊಡಕಾಯಿತು. ಮಧ್ಯಾಹ್ನದ ಬಳಿಕ ಮಳೆಯ ಪ್ರಮಾಣ ಇಳಿಮುಖವಾಗಿ ಜನಜೀವನ ಸಹಜ ಸ್ಥಿತಿಗೆ ಆಗಮಿಸಿತು.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ- 72.6ಮಿ.ಮೀ., ಕುಂದಾಪುರ- 6.6ಮಿ.ಮೀ., ಉಡುಪಿ- 60.5ಮಿ.ಮೀ., ಬೈಂದೂರು- 9.7ಮಿ.ಮೀ., ಬ್ರಹ್ಮಾವರ- 18.6ಮಿ.ಮೀ., ಕಾಪು- 76.3ಮಿ.ಮೀ., ಹೆಬ್ರಿ- 21.6 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 32.9 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ರಸ್ತೆಯಲ್ಲೇ ಹರಿದ ಕಲ್ಲುಮಣ್ಣು: ಭಾರೀ ಮಳೆಯಿಂದಾಗಿ ಉಡುಪಿ -ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮಣಿಪಾಲ ಐನಾಕ್ಸ್‌ನಿಂದ ಸಿಂಡಿಕೇಟ್ ಸರ್ಕಲ್ ಮಧ್ಯೆ ಇರುವ ಏರಿಯಲ್ಲಿ ರಸ್ತೆಬದಿ ತುಂಬಿಸ ಲಾದ ಮಣ್ಣು ಕೊಚ್ಚಿ ಕೊಂಡು ಹೋಗಿದೆ. ಇಲ್ಲಿ ಸಿಂಡಿಕೇಟ್ ಸರ್ಕಲ್‌ನಿಂದ ಕೆಳಗೆ ಮಳೆ ನೀರು ಹರಿದು ಹೋಗಲು ಸರಿಯಾದ ತೋಡಿನ ವ್ಯವಸ್ಥೆ ಇಲ್ಲದೆ ಈ ಆವಾಂತರ ಸೃಷ್ಠಿಯಾಗಿದೆ.
ಮಳೆ ನೀರಿನ ರಸಭಕ್ಕೆ ರಸ್ತೆ ಬದಿಯ ಮಣ್ಣು, ದೊಡ್ಡ ಕಲ್ಲುಗಳು ಕೂಡ ಕೊಚ್ಚಿಕೊಂಡು ರಸ್ತೆಯಲ್ಲೇ ಹರಿ ದಿದೆ. ಸುಮಾರು 500 ಮೀಟರ್ ದೂರದವರೆಗೂ ಈ ಕಲ್ಲುಗಳು ಕೊಚ್ಚಿ ಹೋಗಿ ರಸ್ತೆಯ ಮಧ್ಯೆ ರಾಶಿ ಬಿದ್ದಿರುವುದು ಕಂಡುಬಂದಿದೆ. ಇದರಿಂದ ಐನಾಕ್ಸ್ ಸಮೀಪ ರಸ್ತೆ ಬದಿ ಬೃಹತ್ ಆಕಾರದ ಅಪಾಯಕಾರಿ ತೋಡು ಸೃಷ್ಠಿಯಾಗಿದೆ. ಇಲ್ಲಿ ಇನ್ನೊಂದು ಭಾಗದಲ್ಲಿ ಬೃಹತಾಕಾದ ಹೊಂಡ ಇರುವುದರಿಂದ ಇಲ್ಲಿ ಮಣ್ಣು ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.
ಸಂಚಾರದಲ್ಲಿ ಅಡಚಣೆ: ರಾಷ್ಟ್ರೀಯ ಹೆದ್ದಾರಿಯಲ್ಲೇ ಮಣ್ಣು ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೃಹತ್ ಆಕಾರದ ಕಲ್ಲುಗಳು ಕೂಡ ಮಳೆ ನೀರಿನಲ್ಲಿ ಕೊಚ್ಚಿ ಕೊಂಡು ಬಂದಿ ರುವುದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
ಐನಾಕ್ಸ್ ಸಮೀಪ ಕೆಸರು ನೀರಿನಲ್ಲಿ ಕೆಲ ದ್ವಿಚಕ್ರ ವಾಹನಗಳು ಸಿಲುಕಿ ರುವುದು ಕಂಡುಬಂತು. ಇದ ರಿಂದ ಗಂಟೆಗಟ್ಟಲೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಈ ಹಿನ್ನೆಲೆಯಲ್ಲಿ ಇನ್ನೊಂದು ಬದಿ (ಮಣಿಪಾಲ- ಉಡುಪಿ) ಎರಡೂ ಕಡೆಯ ವಾಹನ ಸಂಚರಿಸಲು ಅನುವು ಮಾಡಿ ಕೊಡಲಾಯಿತು. ಮಣಿಪಾಲದಿಂದ ಉಡುಪಿ ಬರುವ ಕೆಲವು ವಾಹನಗಳನ್ನು ಪೆರಂಪಳ್ಳಿ ಮಾರ್ಗವಾಗಿ ಕಳುಹಿಸಲಾಯಿತು.
ಅಂಗಡಿಗಳಿಗೆ ನುಗ್ಗಿದ ನೀರು: ಸಿಂಡಿಕೇಟ್ ಸರ್ಕಲ್‌ನಿಂದ ಕೆಳಗೆ ರಸ್ತೆಯ ಬದಿ ಮಣ್ಣು ಕಲ್ಲುಗಳು ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬಂದು ಅಲ್ಲೇ ಸಮೀಪದ ವಾಣಜ್ಯ ಸಂಕೀರ್ಣದ ಕಟ್ಟಡದ ಅಂಗಡಿಗಳಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ.
ಸೆಂಟ್ರಲ್ ಪಾರ್ಕ್ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಹೊಟೇಲು, ಬಟ್ಟೆ ಅಂಗಡಿ, ಸೆಲೂನು ಸೇರಿದಂತೆ ಸುಮಾರು 10 ಆಂಗಡಿಗಳಿಗೆ ಕೆಸರು ನುಗ್ಗಿವೆ. ಇದರಿಂದ ಅಪಾರ ಹಾನಿ ಉಂಟಾಗಿದೆ. ಅದೇ ರೀತಿ ಲಕ್ಷ್ಮೀಂದ್ರನಗರದ ರಸ್ತೆ ಬದಿಯಲ್ಲಿನ ಐಸ್‌ಕ್ರೀಂ ಪಾರ್ಲರ್‌ಗೂ ನೀರು ನುಗ್ಗಿ, ಇಡೀ ಅಂಗಡಿ ಕೆಸರು ಮಯವಾಗಿದೆ. ಅಲ್ಲೇ ಸಮೀಪದ ಟೈಲರ್ ಅಂಗಡಿಗೂ ನೀರು ನುಗ್ಗಿವೆ.
ಚರಂಡಿ ಹೂಳು ತೆರವು: ಉಡುಪಿ ನಗರದಲ್ಲಿ ಹೂಳು ತುಂಬಿದ ತೋಡುಗಳಿಂದಾಗಿ ಕೆಲವು ರಸ್ತೆಗಳಲ್ಲಿ ಮಳೆನೀರು ನಿಂತು ತೊಂದರೆ ಉಂಟಾಗಿತ್ತು. ಹೀಗೆ ಒಟ್ಟು 42 ಕಡೆಗಳಲ್ಲಿ ಚರಂಡಿ ಬ್ಲಾಕ್ ಆಗಿರುವ ಕುರಿತು ದೂರುಗಳು ನಗರಸಭೆಗೆ ಬಂದಿದ್ದು, ಅದರಂತೆ ತಕ್ಷಣವೇ ಸಿಬ್ಬಂದಿಗಳು ತೆರವು ಕಾರ್ಯಾಲ ಚರಣೆ ನಡೆಸಿದ್ದಾರೆ.
ಅದೇ ರೀತಿ ನಗರದ ಲಕ್ಷೀಂದ್ರನಗರ, ಇಂದ್ರಾಳಿ ದೇವಸ್ಥಾನ ರಸ್ತೆ, ಇಂದ್ರಾಳಿ ರೈಲ್ವೆ ರಸ್ತೆ, ಬೈಲೂರು, ಶಿರಿಬೀಡು ಬಾಲಭವನದ ಬಳಿ, ಹಯಗ್ರೀವ ನಗರ, ಕುಂಜಿಬೆಟ್ಟು ಪಣಿಯಾಡಿ ರಸ್ತೆ, ಪುತ್ತೂರು ದೇವಸ್ಥಾನ ರಸ್ತೆಗಳಲ್ಲಿ ಮರ ಬಿದಿದ್ದು, ಕೂಡಲೇ ನಗರಸಭೆ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸಿದರು.
ಲಕ್ಷ್ಮೀಂದ್ರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತೀರಾ ಸಣ್ಣದಾದ ತೋಡಿನಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆಯೇ ನೀರು ಹರಿದು ಹೋಗುತ್ತಿತ್ತು. ತಕ್ಷಣ ನಗರಸಭೆ ಸಿಬ್ಬಂದಿಗಳು ಆಗಮಿಸಿ ಜೆಸಿಬಿ ಮೂಲಕ ತೋಡು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ನಗರದ ಜೋಡುಕಟ್ಟೆ, ಕಡಿಯಾಳಿ, ಕುಂಜಿಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನೀರು ಹರಿಯುತ್ತಿ ರುವುದು ಕಂಡುಬಂತು. ದೊಡ್ಡಣಗುಡ್ಡೆ ಮನೋಳಿಗುಜ್ಜಿ ಎಸ್ಸಿ ಕಾಲನಿಯ ರಸ್ತೆ ಕುಸಿತವಾಗಿ ಸಂಚಾರಕ್ಕೆ ಸಮಸ್ಯೆಯಾಯಿತು.ಮಳೆಯಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಹೊರ ಜಿಲ್ಲೆ ಹಾಗೂ ರಾಜ್ಯಗಳ ಭಕ್ತರು ತೀರಾ ತೊಂದರೆ ಅನುಭವಿಸಿದರು.
ಸಿಡಿಲು ಬಡಿದು 5 ಮನೆಗಳಿಗೆ ಹಾನಿ
ಕಾರ್ಕಳ ತಾಲೂಕಿನ ವಿವಿಧೆಡೆ ಸಿಡಿಲು ಬಡಿಲು ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸಿಡಿಲು ಬಡಿದು ಪರಿಣಾಮ ನಿಟ್ಟೆ ಗ್ರಾಮದ ಬೇಬಿ ಪೂಜಾರ್ತಿ, ಜಯ ಪೂಜಾರ್ತಿ, ರತ್ನಾಕರ ಪೂಜಾರಿ, ಮಹಾಬಲ ಪೂಜಾರಿ ಹಾಗೂ ಎರ್ಲಪಾಡಿ ಗ್ರಾಮದ ವಿನೋದ ಶೆಟ್ಟಿ ಎಂಬವರ ಮನೆಗಳಿಗೆ ಹಾನಿಯಾಗಿ ಒಟ್ಟು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಮಳೆಯಿಂದ ಕಾರ್ಕಳದ ಶರ್ಮಿಳಾ ವಾಸದ ಮನೆ ಭಾಗಶಃ ಹಾನಿಯಾಗಿ 10,000ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
‘ಮಳೆಯಿಂದಾಗಿ ಉಡುಪಿ ನಗರದಲ್ಲಿ 8-10 ಕಡೆಗಳಲ್ಲಿ ತೋಡುಗಳ ನೀರು ಉಕ್ಕಿ ಹರಿದು ಸಮಸ್ಯೆಗ ಳಾಗಿವೆ. ಎಲ್ಲಿಯೂ ಯಾವುದೇ ಮನೆಗಳಿಗೆ ಹಾನಿ ಯಾಗಿಲ್ಲ. ಚರಂಡಿಗಳ ತೆರವು ಕಾರ್ಯಾಚರಣೆಯಲ್ಲಿ ಪೌರಕಾರ್ಮಿಕರು ಹಾಗೂ 50 ಜನ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿದ ನೌಕರರನ್ನು ಬಳಸಿ ಕೊಳ್ಳಲಾಗಿದೆ. ತುರ್ತು ಕಾರ್ಯಾಚರಣೆ ನಡೆಸಿ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆʼ.
-ಮಹೇಶ್, ಪೌರಾಯುಕ್ತರು, ಉಡುಪಿ ನಗರಸಭೆ
‘ಮುಂಗಾರು ಆರಂಭವಾಗುವ ಪೂರ್ವಭಾವಿಯಾಗಿ ನಗರದ ರಾಜ ಕಾಲುವೆ ಹಾಗೂ ತೋಡುಗಳ ಹೂಳು ತೆಗೆಯುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿ, ಶೇ.60ರಷ್ಟು ಕಾಮಗಾರಿ ಪೂರ್ಣಗೊಳಿಸ ಲಾಗಿತ್ತು. ಆದರೆ ಇದೀಗ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ ಹಲವು ಕಡೆ ನೀರು ಹರಿದು ಹೋಗಲು ಸಾಧ್ಯವಾಗದೆ ಕೆಲವು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಗಳಾಗಿವೆ. ತೋಡುಗಳ ಹೂಳು ತೆಗೆಯಲು ಈಗಾಗಲೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಟ್ಟಡಗಳ ಕಾಮಗಾರಿಗೆ ಸಂಬಂಧಿಸಿದ ಮಣ್ಣುಗಳನ್ನು ಕೂಡ ತೋಡಿಗೆ ಹಾಕಲಾಗಿದೆ. ಅಲ್ಲದೆ ಕೆಲವು ಕಡೆ ತೋಡುಗಳ ಅತಿ ಕ್ರಮಣ ಕೂಡ ನಡೆದಿದೆ. ಇವುಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ’
-ಯಶ್‌ಪಾಲ್ ಸುವರ್ಣ, ಉಡುಪಿ ಶಾಸಕರು
ಹವಾಮಾನ ಮುನ್ಸೂಚನೆ ಪಾಲಿಸಿ: ಡಿಸಿ
ಜಿಲ್ಲೆಯಲ್ಲಿ ಈಗಾಗಲೇ ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಾರಂಭವಾಗಿದ್ದು, ಈ ಸಂಧರ್ಭದಲ್ಲಿ ಗುಡುಗು-ಸಿಡಿಲಿನಿಂದ ಹಾಗೂ ಗಾಳಿ-ಮಳೆಯಿಂದ ಸಾರ್ವಜನಿಕ ಮತ್ತು ಜಾನುವಾರು ಪ್ರಾಣಹಾನಿ ಯಾಗುವ ಸಂಭವವಿರುತ್ತದೆ. ಅದನ್ನು ತಡೆಗಟ್ಟಲು ಪ್ರಸ್ತುತ ಸಾಲಿನಲ್ಲಿ ಸಾರ್ವಜನಿಕರು ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ಪ್ರಾಧಿಕಾರದಿಂದ ಹೊರಡಿಸುವ ಮುನ್ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದ್ದಾರೆ.
ಇಂತಹ ಸಂಧರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಆದಷ್ಟೂ ಮನೆಯಲ್ಲಿಯೇ ಇದ್ದು, ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಇದರಿಂದ ಸಂಭವಿಸಬಹುದಾದ ಮಾನವ ಹಾಗೂ ಜಾನುವಾರು ಹಾನಿಯನ್ನು ತಡೆಗಟ್ಟಲು ಸಾಧ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
135 ವಿದ್ಯುತ್ ಕಂಬಗಳು ಧರೆಗೆ
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಹಲವು ಕಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿ ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಗಾಳಿಮಳೆಯಿಂದ ಜಿಲ್ಲೆಯ 135 ವಿದ್ಯುತ್ ಕಂಬಗಳು, 1.2.ಕಿ.ಮೀ. ಉದ್ದದ ವಿದ್ಯುತ್ ತಂತಿ, ಎರಡು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಒಟ್ಟು 25ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಮಣಿಪಾಲ ಸಮೀಪದ ಶಿವಪಾಡಿ ಶ್ರೀಉಮಾ ಮಹೇಶ್ವರಿ ದೇವಸ್ಥಾನ ಜಲಾವೃತ ಗೊಂಡಿದೆ. ಮಳೆಯ ನೀರು ದೇವಳದ ಮೆಟ್ಟಿಲುಗಳ ಮೂಲಕ ಒಳಗೆ ಹರಿದು ಬಂದಿದ್ದು, ದೇವಳ ಒಳಗೆ ನೀರು ತುಂಬಿಕೊಂಡಿದೆ.







