ಗ್ರಾಪಂ ಉಪಚುನಾವಣೆ: ಉದ್ಯಾವರ, ಪಡುಬಿದ್ರೆಯಲ್ಲಿ ನಿಷೇಧಾಜ್ಞೆ ಜಾರಿ

ಉಡುಪಿ: ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಉಡುಪಿ ತಾಲೂಕಿನ ಉದ್ಯಾವರ ಗ್ರಾಪಂ-1 ಹಾಗೂ ಕಾಪು ತಾಲೂಕಿನ ಪಡುಬಿದ್ರೆ ಗ್ರಾಪಂ-1 ಸದಸ್ಯ ಸ್ಥಾನಗಳಿಗೆ ಮೇ 25ರಂದು ಉಪಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.
ಮೇ 25ರಂದು ಬೆಳಗ್ಗೆ 6 ಗಂಟೆಯಿಂದ ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿನ ಮತದಾನ ಕೇಂದ್ರಗಳ ಸುತ್ತ ಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರಗಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಮತದಾನದ ದಿನದಂದು ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯೊಳಗೆ ಚುನಾವಣೆ ಪ್ರಚಾರ ನಿಷೇಧಿಸ ಲಾಗಿದೆ. ಮತಗಟ್ಟೆಗಳ ಸುತ್ತ 100 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್, ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾ ಗಿದೆ. ಮತಗಟ್ಟೆಗಳ ಸುತತಿ 200 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಹೋಟೆಲ್‌ಗಳು ಮತ್ತು ಅತಿಥಿಗೃಹಗಳಲ್ಲಿ ವಾಸತಿವ್ಯ ಮಾಡಿರುವವರ ಪಟ್ಟಿಗಳ ಪರಿಶೀಲನೆ ಮಾಡಿ, ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ವ್ಯಕ್ತಿ ಗಳನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಸಂತೆ, ಜಾತ್ರೆ ನಿಷೇಧ
ಉಪಚುನಾವಣೆ ನಡೆಯುವ ಉದ್ಯಾವರ ಹಾಗೂ ಪಡುಬಿದ್ರೆ ಗ್ರಾಪಂ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 36 ರ ಅಡಿಯಲ್ಲಿ ಚುನಾವಣೆ ನಡೆಯುವ ದಿನದಂದು ಸಂತೆ, ಜಾತ್ರೆಗಳನ್ನು ನಿಷೇಧಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶಿಸಿದ್ದಾರೆ.







