ಕೋವಿಡ್ ಸೋಂಕಿನ ಬಗ್ಗೆ ಆತಂಕ ಬೇಡ; ಅಗತ್ಯ ಮುಂಜಾಗ್ರತೆ ವಹಿಸಿ: ಉಡುಪಿ ಡಿಸಿ ವಿದ್ಯಾಕುಮಾರಿ ಸೂಚನೆ
ಆರೋಗ್ಯ ಇಲಾಖೆ ಸಮನ್ವಯ ಸಮಿತಿ ಸಭೆ

ಉಡುಪಿ, ಜೂ.4: ಸಾರ್ವಜನಿಕರು ಕೋವಿಡ್ ಸೋಂಕಿನ ಕುರಿತಂತೆ ಅನಗತ್ಯ ಭಯ ಪಡದೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಸೋಂಕಿನಿಂದ ದೂರವಿರಲು ಸಾಧ್ಯವಿದೆ. ಹೀಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಜಿಲ್ಲೆಯ ಜನತೆಗೆ ಸೂಚನೆ ನೀಡಿದ್ದಾರೆ.
ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬರುತ್ತಿವೆ. ಜಿಲ್ಲೆಯಲ್ಲೂ ಸಹ ಕೆಲವು ಪ್ರಕರಣಗಳು ವರದಿಯಾಗಿವೆ. ಆದರೆ ಜನತೆ ಇದರಿಂದ ಆತಂಕಕ್ಕೊಳಗಾಗದೇ ಸರಕಾರ ಸೂಚಿಸಿರುವ ಸುರಕ್ಷತಾ ಕ್ರಮ ಗಳನ್ನು ತಪ್ಪದೇ ಪಾಲಿಸಬೇಕು. ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಕೋವಿಡ್ ಸೋಂಕಿನ ಬಗ್ಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ಶೀತ, ಉಸಿರಾಟ ತೊಂದರೆ ಮುಂತಾದ ಗುಣಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಕೊರೋನಾ ಪರೀಕ್ಷೆಯನ್ನು ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬೇಕು. ಸೋಂಕು ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದರ ಜೊತೆಗೆ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದರು.
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ವ್ಯಾಪಕವಾಗಿ ಆಗಿದೆ. ಮುಂಗಾರು ಮಳೆ ಸಹ ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ. ಮಳೆಯ ನೀರು ಎಲ್ಲೆಂದರಲ್ಲಿ ಶೇಖರಣೆಗೊಂಡಲ್ಲಿ ಸೊಳ್ಳೆಗಳ ಸಂತಾನೋತ್ಪತಿ ವೃದ್ಧಿಗೊಂಡು, ಡೆಂಗಿ, ಮಲೇರಿಯಾ, ಚಿಕನ್‌ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಸಾರ್ವಜನಿಕರಿಗೆ ಇವುಗಳನ್ನು ತಡೆಗಟ್ಟುವ ಕುರಿತು ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ರೋಗಗಳು ಹರಡದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಕಾರ್ಯಪ್ರವೃತ್ತವಾಗಬೇಕು ಎಂದರು.
ನೀರು ನಿಲ್ಲದಂತೆ ಜಾಗೃತೆ: ಸಾಮಾನ್ಯವಾಗಿ ಮಳೆಯ ನೀರು ಕಟ್ಟಡದ ಮೇಲ್ಛಾವಣಿಗಳ ಮೇಲೆ, ಅನುಪಯುಕ್ತ ವಸ್ತುಗಳಲ್ಲಿ, ಟೈರುಗಳಲ್ಲಿ, ಎಳನೀರಿನ ಚಿಪ್ಪು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೇಖರಣೆ ಗೊಂಡು ಆ ಸ್ಥಳಗಳಲ್ಲಿ ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳ ತಾಣಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮುಂದಾಗಬೇಕು. ವಾರದ ಶುಕ್ರವಾರ ಡ್ರೈ ಡೇಯನ್ನಾಗಿಸಬೇಕು. ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಒಂದೊಮ್ಮೆ ಇವುಗಳನ್ನು ಉಲ್ಲಂಘಿಸಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಆಯುಷ್ಮಾನ್ ಯೋಜನೆ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಾರ್ವಜನಿ ಕರು ಗುಣಮಟ್ಟದ ಅಗತ್ಯ ಆರೋಗ್ಯ ಸೇವೆ ಗಳನ್ನು ಪಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸಾರ್ವಜನಿಕರು ಇವುಗಳಿಂದ ವಂಚಿತರಾಗುವ ಸಾಧ್ಯತೆಗಳಿವೆ. ಇದಕ್ಕೆ ಆಸ್ಪದ ನೀಡಬಾರದು. ತುರ್ತು ಚಿಕಿತ್ಸೆಗಳು ಅಗತ್ಯ ವಿದ್ದಲ್ಲಿ ನಿಯಮಾನುಸಾರ ಮಾನವೀಯ ನೆಲೆಗಟ್ಟಿನಲ್ಲಿ ಚಿಕಿತ್ಸೆಗಳನ್ನು ಒದಗಿಸಬೇಕು ಎಂದರು.
ಜಿಲ್ಲೆಯ ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಕೆ.ಪಿ.ಎಂ.ಇ ಕಾಯ್ದೆಯನ್ವಯ ಅಗ್ನಿ ನಿರೋಧಕ ಸೌಲಭ್ಯ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಒಂದೊಮ್ಮೆ ಇವುಗಳನ್ನು ಉಲ್ಲಂಘಿಸಿದ್ದಲ್ಲಿ ಅಂತಹ ಆಸ್ಪತ್ರೆ ಗಳ ಪರವಾನಿಗೆ ಯನ್ನು ರದ್ದುಪಡಿಸಬೇಕು ಎಂದು ಡಾ.ವಿದ್ಯಾಕುಮಾರಿ ಸೂಚಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತಿ ರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸುತ್ತಿರಬೇಕು ಎಂದು ನಿರ್ದೇಶನ ನೀಡಿದರು.
ತೀವ್ರತರ ಅತಿಸಾರ ಭೇದಿ ನಿಯಂತ್ರಣಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಒಂದೊಮ್ಮೆ ರೋಗ ಕಂಡಬಂದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಶಾ ಕಾರ್ಯಕರ್ತರ ಮೂಲಕ ಅರಿವು ಮೂಡಿಸಬೇಕು. ಓಆರ್‌ಎಸ್ ಪ್ಯಾಕೆಟ್‌ಗಳನ್ನು ಪ್ರತೀ ಮನೆಗಳಿಗೆ ನೀಡಬೇಕು. ಶಾಲೆಗಳಲ್ಲಿ ನೈರ್ಮಲ್ಯಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಎಂಡೋಸಲ್ಫಾನ್ ಪೀಡಿತರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳು ಹಾಗೂ ಸೌಲಭ್ಯಗಳನ್ನು ತಪ್ಪದೇ ಕಲ್ಪಿಸಬೇಕು. ಕೆಲವು ಇತರೆ ವಿಕಲಚೇತನರು ಎಂಡೋಸಲ್ಫಾನ್ ಪೀಡಿತರಿಗೆ ದೊರೆಯುವ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಪಡೆಯಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ನೈಜತೆಯನ್ನು ಪರಿಶೀಲಿಸಬೇಕು ಎಂದರು.
ಜಿಲ್ಲೆಯ ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಉತ್ಪತ್ತಿಯಾಗುವ ತ್ಯಾಜ್ಯಗಳು ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿರುವ ಬಗ್ಗೆ ತಪ್ಪದೇ ಪರಿಶೀಲನೆ ಮಾಡಬೇಕು. ಇವುಗಳ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಕ್ರಮವಹಿಸಬೇಕು. ಆಸ್ಪತ್ರೆಗಳಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವ ಬಗ್ಗೆಯೂ ನೋಡಿ ಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿಎಸ್‌ಓ ಡಾ. ನಾಗರತ್ನ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಹೆಚ್.ಅಶೋಕ್, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಕೆಎಂಸಿಯ ತಜ್ಞ ವೈದ್ಯರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
903 ತೆರೆದ ಬಾವಿಗಳ ಕ್ಲೋರಿನೇಷನ್
ಜಿಲ್ಲೆಯಲ್ಲಿ ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿರುವ ಬಗ್ಗೆ ನೀರಿನ ಗುಣಮಟ್ಟ ಪರೀಕ್ಷೆಯನ್ನು 2025ನೇ ಸಾಲಿನಲ್ಲಿ 7650 ಸ್ಥಳಗಳಲ್ಲಿ ಕೈಗೊಳ್ಳಲಾಗಿದೆ. ಇವುಗಳಲ್ಲಿ 983 ಮೂಲಗಳ ನೀರು ಕಲುಷಿತ ಗೊಂಡಿರುವುದು ಕಂಡುಬಂದಿದೆ. ಇವುಗಳ ಪೈಕಿ 908 ತೆರೆದ ಬಾವಿಗಳನ್ನು ಈಗಾಗಲೇ ಕ್ಲೋರಿನೇಷನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇನ್ನು ಕ್ಲೋರಿನೇಷನ್ ಮಾಡದೇ ಇರುವ ಬಾವಿಗಳ ನೀರನ್ನು ಚೆನ್ನಾಗಿ ಸೋಸಿ, ನೀರನ್ನು ಕುದಿಸಿ ಬಳಕೆ ಮಾಡಲು ಸೂಚಿಸಲಾಗಿದೆ. ಮಳೆಯ ಆರಂಭದ ದಿನಗಳಲ್ಲಿ ಬಾವಿಯ ನೀರು ಕಲುಷಿತಗೊಳ್ಳುವ ಸಾಧ್ಯತೆ ಗಳಿರುತ್ತವೆ. ಕುಡಿಯುವ ನೀರಿನ ಪರೀಕ್ಷೆಯನ್ನು ಆಗಿಂದಾಗ್ಗೆ ಮಾಡುತ್ತಿ ರಬೇಕು. ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಂಡಲ್ಲಿಇವುಗಳ ನಿಯಂತ್ರಣ ಸಾಧ್ಯ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ 8175 ನಾಯಿ ಕಡಿತದ ಪ್ರಕರಣ
ಜಿಲ್ಲೆಯಲ್ಲಿ 2025ರ ಜನವರಿ ತಿಂಗಳಿನಿಂದ ಈವರೆಗೆ 8175 ನಾಯಿ ಕಡಿತ ಪ್ರಕರಣಗಳು ಹಾಗೂ 202 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಜನವರಿ ತಿಂಗಳಲ್ಲಿ 1696, ಫೆಬ್ರವರಿಯಲ್ಲಿ 1721, ಮಾರ್ಚ್‌ನಲ್ಲಿ 1744, ಎಪ್ರಿಲ್‌ನಲ್ಲಿ 1822, ಮೇ ತಿಂಗಳಲ್ಲಿ 1192 ಸೇರಿದಂತೆ ಒಟ್ಟು 8175 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಾವಿನ ಕಡಿತಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ 29, ಫೆಬ್ರವರಿಯಲ್ಲಿ 41, ಮಾರ್ಚ್‌ನಲ್ಲಿ 30, ಎಪ್ರಿಲ್‌ನಲ್ಲಿ 57 ಹಾಗೂ ಮೇಯಲ್ಲಿ 45 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದರು.
ಪ್ರತಿಯೊಂದು ಆರೋಗ್ಯ ಕೇಂದ್ರದಲ್ಲಿಯೂ ನಾಯಿ ಮತ್ತು ಹಾವು ಕಡಿತ ಪ್ರಕರಣಗಳಿಗೆ ಅಗತ್ಯವಿರುವ ಔಷಧಿಗಳನ್ನು ದಾಸ್ತಾನು ಇಟ್ಟುಕೊಳ್ಳುವು ದರೊಂದಿಗೆ ಪ್ರತಿಯೊಂದು ಪ್ರಕರಣದಲ್ಲೂ ಬಂದವರಿಗೆ ಚುಚ್ಚುಮದ್ದನ್ನು ಕೊಟ್ಟು ಅಗತ್ಯ ಚಿಕಿತ್ಸೆಗಳನ್ನು ನೀಡಬೇಕು. ಜನಸಾಮಾನ್ಯರು ಅಗತ್ಯ ಎಚ್ಚರಿಕೆಗಳನ್ನು ವಹಿಸುವುದರೊಂದಿಗೆ ಇವುಗಳ ಕಡಿತದಿಂದ ದೂರ ಉಳಿಯಲು ಸಾಧ್ಯ. ರೈತರು ಸಹ ಸುರಕ್ಷತಾ ಸಾಧನಗಳನ್ನು ಬಳಕೆ ಮಾಡಬೇಕು ಎಂದರು.
ಮಕ್ಕಳಿಗೆ ನೀಡುವ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಪ್ರತಿಯೊಬ್ಬರಿಗೂ ನೀಡಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತ ವಾಗದಂತೆ ನೋಡಿಕೊಳ್ಳಬೇಕು. ಶಾಲೆ ಹಾಗೂ ಅಂಗನವಾಡಿ ದಾಖಲಾತಿ ಸಂದರ್ಭದಲ್ಲಿ ಲಸಿಕೆಗಳನ್ನು ಪಡೆದಿರುವ ಬಗ್ಗೆ ಪೋಷಕರಿಂದ ಮಾಹಿತಿ ಗಳನ್ನು ಕಲೆ ಹಾಕಬೇಕು. ಒಂದೊಮ್ಮೆ ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ಅವುಗಳನ್ನು ಹಾಕಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.







