ಸಿದ್ದಾಪುರ-ಹೊಸಂಗಡಿ ಭಾಗದಲ್ಲಿ ಒಂಟಿ ಸಲಗದ ಓಡಾಟ!
► ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿದ ಆತಂಕ ►ಮುಂದುವರಿದ ಇಲಾಖಾ ಕಾರ್ಯಾಚರಣೆ

ಕುಂದಾಪುರ: ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಬಾಳೆಬರೆ ಘಾಟಿ ಬಳಿ ಮಂಗಳವಾರ ಸಂಜೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗ ರಾತ್ರಿಯಿಡೀ ಆಸುಪಾಸು ಭಾಗದಲ್ಲಿ ಸಂಚರಿಸಿ ಬುಧವಾರ ಮುಂಜಾನೆ ವೇಳೆ ಕುಂದಾಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಪ್ರದೇಶದಲ್ಲಿ ಓಡಾಡಿರುವ ಬಗ್ಗೆ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಬುಧವಾರ ಈ ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಸಿದ್ದಾಪುರದಲ್ಲಿ ನಡೆಯುವ ವಾರದ ಸಂತೆಯನ್ನು ಮುಂದೂಡಲಾಗಿದೆ. ಈ ಸಂಬಂಧ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.
ರೆಡಿಯೋ ಕಾಲರ್ ಅಳವಡಿಸಿದ ಒಂಟಿ ಗಂಡು ಕಾಡಾನೆ ಬಾಳೆಬರೆ ಘಾಟಿಯಿಳಿದು ಮಂಗಳವಾರ ರಾತ್ರಿಯಿಡಿ ಅಲ್ಲಲ್ಲಿ ಸುತ್ತಾಡಿದೆ. ಬಹುತೇಕ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆ ಚಲನವಲನ ಕೆಲವು ಸಿಸಿಟಿವಿಗಳಲ್ಲಿ ಸೆರೆ ಯಾಗಿದೆ. ಬಳಿಕ ಮುಂಜಾನೆ ವೇಳೆ ಸಿದ್ದಾಪುರ-ಹೊಸಂಗಡಿ ಮಾರ್ಗ ಮಧ್ಯ ದಲ್ಲಿರುವ ಹೆನ್ನಾಬೈಲು ಎಂಬಲ್ಲಿನ ದಟ್ಟ ಕಾಡಿನೊಳಕ್ಕೆ ಆನೆ ಹೋದ ಹೆಜ್ಜೆ ಕುರುಹುಗಳು ಪತ್ತೆಯಾಗಿವೆ. ಕುಂದಾಪುರ ತಾಲೂಕಿನಲ್ಲಿ ಇದೆ ಮೊದಲ ಬಾರಿಗೆ ಕಾಡಾನೆ ಗೋಚರವಾಗಿದ್ದರಿಂದ ಇಲ್ಲಿನ ಸ್ಥಳೀಯರು, ವಾಹನ ಸವಾರಾರಲ್ಲಿ ಆತಂಕ ಉಂಟು ಮಾಡಿದೆ.
ದಿನವಿಡೀ ಕಾರ್ಯಾಚರಣೆ: ಚಿಕ್ಕಮಗಳೂರಿನಿಂದ ಬಂದ ಎಲಿಫೆಂಟ್ ಟಾಸ್ಕ್‌ಫೋರ್ಸ್, ಅರಣ್ಯ ಇಲಾಖೆ, ಸಿದ್ದಾಪುರ ವನ್ಯಜೀವಿ ವಿಭಾಗದ ಅಧಿಕಾರಿ-ಸಿಬ್ಬಂದಿಗಳು ಹಾಗೂ ಪೊಲೀಸರ ತಂಡ ದಿನವಿಡೀ ಕಾಡಾನೆ ಗಾಗಿ ಹುಡುಕಾಟ ನಡೆಸಿದೆ.
ಘಟ್ಟ ಇಳಿದು ಬಂದು ಹತ್ತಾರು ಕಿಲೋಮೀಟರ್ ಅಲೆದಾಡಿ ಸುಸ್ತಾದ ಕಾಡಾನೆಯನ್ನು ಬೆನ್ನು ಹತ್ತಿದ ವನ್ಯಜೀವಿ ಇಲಾಖೆಯವರು ಅಗತ್ಯ ಸಲಕರಣೆಗಳೊಂದಿಗೆ, ರೇಡಿಯೋ ಕಾಲರ್ ಆಧಾರದಲ್ಲಿ ಮಧ್ಯಾಹ್ನದ ವೇಳೆಗೆ ತಂಡ ರಚಿಸಿಕೊಂಡು ಕಾಡಿಗೆ ತೆರಳಿ ಸಂಜೆಯವರೆಗೆ ಅರಸಿದರು.
ಕಳೆದ ಒಂದು ವಾರದಿಂದ ಬೆನ್ನು ಹತ್ತಿರುವ ಇಟಿಎಸ್ ತಂಡ ಈ ಕಾರ್ಯಾಚರಣೆ ನಡೆಸಿ ದಟ್ಟಾರಣ್ಯಕ್ಕೆ ಆನೆಯನ್ನು ವಾಪಾಸ್ ಕಳಿಸಲು ಕಾರ್ಯತಂತ್ರ ರೂಪಿಸಿದರೂ ಕೂಡ ಸಂಜೆಯವರೆಗೂ ಫಲಪ್ರದ ವಾಗಿಲ್ಲ. ಸಾರ್ವಜನಿಕರಿಗೆ ಎಚ್ಚರಿಕೆ, ಮಾಹಿತಿ ನೀಡಲು ವಾಹನದಲ್ಲಿ ಮೈಕ್ ಪ್ರಚಾರ ಮಾಡಲಾಗಿತ್ತು.
ಸಂಜೆ ಮತ್ತೆ ಆತಂಕ: ಒಂದೆಡೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆನೆ ಚಲನವಲನದ ಬಗ್ಗೆ ನಿಗಾಯಿಟ್ಟಿದ್ದರೆ ಬುಧವಾರ ಮುಸ್ಸಂಜೆ ವೇಳೆ ಕಾಡಾನೆ ಸಿದ್ದಾಪುರ ಪೇಟೆ ಸಂಪರ್ಕದ ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ವಾಹನ ಓಡಾಟಕ್ಕೆ ಕಡಿವಾಣ ಹಾಕಿ ಆನೆಯನ್ನು ಮತ್ತೆ ಕಾಡಿಗೆ ಕಳುಹಿಸುವಲ್ಲಿ ನಿರತರಾಗಿದ್ದರು. ಅಲ್ಲಿಂದ ಕಮಲಶಿಲೆ ಭಾಗದಲ್ಲಿ ರಾತ್ರಿ ೮ ಗಂಟೆ ವೇಳೆ ಆನೆ ಕಾಣಿಸಿಕೊಂಡಿದ್ದು ಜನರಿಗೆ, ವಾಹನ ಸವಾರರಿಗೆ, ಅಂಗಡಿಯವರಿಗೆ ಪರಿಸ್ಥಿತಿ ಬಗ್ಗೆ ತಿಳಿಸಲಾಯಿತು. ಯಾವುದೇ ಕಾರಣಕ್ಕೂ ಜನನಿಬೀಡ ಪ್ರದೇಶವಾದ ಸಿದ್ದಾಪುರ ಪೇಟೆಗೆ ಕಾಡಾನೆ ಬಾರದಂತೆ ಪೊಲೀಸ್, ಅರಣ್ಯ ಇಲಾಖೆ ಜಂಟಿ ತಂಡ ಮುನ್ನೆಚ್ಚರಿಕಾ ಕ್ರಮ ವಹಿಸಿದೆ ಎಂದು ತಿಳಿದುಬಂದಿದೆ.
ಆನೆ ಟ್ರ್ಯಾಕ್‌ಗೆ ಕ್ರಮ: ಡಿಎಫ್‌ಓ ಶಿವರಾಂ ಬಾಬು
ಹಾಸನದಿಂದ ಈ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ಭದ್ರಾ ಅರಣ್ಯ ವಲಯಕ್ಕೆ ಸ್ಥಳಾಂತರಿಸ ಲಾಗಿತ್ತು. ಅಲ್ಲಿಂದ ಶಿವಮೊಗ್ಗ, ಸಾಗರ ವನ್ಯಜೀವಿ ಅರಣ್ಯ ವಿಭಾಗ ದಾಟಿ ಸಿದ್ದಾಪುರ ಅರಣ್ಯ ವಿಭಾಗದಲ್ಲಿ ಸಂಚರಿಸುತ್ತಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಶಿವರಾಂ ಬಾಬು ತಿಳಿಸಿದ್ದಾರೆ.
ಚಿಕ್ಕಮಗಳೂರಿನಿಂದ ಬಂದ 8 ಮಂದಿ ಎಪಿಫೆಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿ, ಸ್ಥಳೀಯ 25-30 ಅಧಿಕಾರಿ, ಸಿಬ್ಬಂದಿ ಆನೆ ಟ್ರ್ಯಾಕ್ ಮಾಡುತ್ತಿದ್ದು ಆದಷ್ಟು ಅರಣ್ಯದೊಳಗೆ ಆನೆ ಇರುವಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಆನೆ ಚಲನವಲನದ ಬಗ್ಗೆ ರೆಡಿಯೋ ಕಾಲರ್ ಮೂಲಕ ಅರ್ಧಗಂಟೆಗೊಮ್ಮೆ ಲೊಕೇಶನ್ ಸಿಗುತ್ತಿದೆ. ಮುಂದಿನ ಕ್ರಮದ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನ ಅನುಸರಿಸ ಲಾಗುವುದು. ಸಾರ್ವಜನಿಕರು ಜಾಗೃತೆ ವಹಿಸ ಬೇಕು ಎಂದು ಅವರು ಮನವಿ ಮಾಡಿದರು.
"ಕಾಡಾನೆಯ ಚಲನವಲನಗಳನ್ನು ಇಲಾಖೆಯವರು ಗಮನಿಸುತ್ತಿದ್ದರಾದರೂ ಆನೆಯು ತನ್ನ ಹಿಂದಿನ ದಾರಿಯನ್ನು ಗುರುತಿಸಿ ಅರಣ್ಯ ಭಾಗಕ್ಕೆ ಹೋಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈ ಭಾಗದಲ್ಲಿ ಮನೆಗಳು ಸೇರಿದಂತೆ ಜನ ಸಂಚಾರ ಹೆಚ್ಚಿರುವ ಕಾರಣ ಯಾವುದೇ ಸಂದರ್ಭದಲ್ಲಿ ಅನಾಹುತಗಳಾಗುವ ಸಂಭವ ಹೆಚ್ಚಿದೆ. ಹಾಗಾಗಿ ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಯಾವುದೇ ಕಾಲವಿಳಂಬವಿಲ್ಲದೆ ಆನೆಯ ಚಲನ ವಲನವನ್ನು ಗಮನಿಸುವುದರ ಜೊತೆಗೆ ತುರ್ತಾಗಿ ಕಾಡಾನೆಯನ್ನು ಅರಣ್ಯಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಬೇಕು"
-ಗುರುರಾಜ್ ಶೆಟ್ಟಿಹೊಳೆ, ಶಾಸಕರು, ಬೈಂದೂರು







