ಪರಿಸರ ಸಂರಕ್ಷಣೆ ಕುರಿತು ಮರು ಚಿಂತನೆ ನಡೆಯಬೇಕು: ಡಿಸಿ ವಿದ್ಯಾಕುಮಾರಿ
ಉಡುಪಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಉಡುಪಿ, ಜೂ.5: ಪರಿಸರ ಸಂರಕ್ಷಣೆಯ ಕುರಿತಂತೆ ಮರು ಆಲೋಚನೆ, ಮರು ಚಿಂತನೆ ನಡೆಯ ಬೇಕಾದ ಅನಿವಾರ್ಯತೆ ಇದೆ. ಇದರೊಂದಿಗೆ ಪ್ಲಾಸ್ಟಿಕ್ ಭೂತದಿಂದ ನಮ್ಮ ಆರೋಗ್ಯದ ಮೇಲಾಗುವ, ಪರಿಸರದ ಮೇಲಾಗುವ ಅನಾಹುತದ ಕುರಿತು ಜನಜಾಗೃತಿಯೂ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ, ಪರಿಸರದ ಅಸಮತೋಲನಕ್ಕೂ ಕಾರಣವಾಗುತ್ತದೆ. ಪರಿಸರ ಸಮತೋಲಿತವಾಗಿದ್ದರೆ ಮಾತ್ರ ಮಾನವನಿಗೆ ಸಹ್ಯ ಹಾಗೂ ಸುಸ್ಥಿರ ಬದುಕು ಸಾಧ್ಯವಾಗುತ್ತದೆ. ಹೀಗಾಗಿ ಪರಿಸರದ ಕುರಿತಂತೆ ನಾವಿಂದು ಗಂಭೀರವಾಗಿ ಚಿಂತಿಸುವ ಸಮಯ ಬಂದಿದೆ. ಇಂದು ಪ್ರಕೃತಿಯಲ್ಲಿ ಕಂಡು ಬರುವ ವಿಕೋಪಗಳೆಲ್ಲವೂ ಮಾನವ ನಿರ್ಮಿತವೇ ಆಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದರು.
ಪರಿಸರವನ್ನು ಮನುಷ್ಯ ಪ್ರೀತಿಸಬೇಕು. ಪ್ರಕೃತಿಯ ಜೀವವೈವಿಧ್ಯತೆಯ ಉಳಿವಿಗೆ ಪ್ರತಿಯೊಬ್ಬ ನಾಗರಿ ಕರು ಕೈಜೋಡಿಸಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಜಾಗೃತಿ ವಹಿಸಿ ಗಿಡಗಳ ಪೋಷಣೆ ಮಾಡಿ ದಲ್ಲಿ ಪರಿಸರ ದಿನದ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಇದನ್ನು ನಾವು ಮೊದಲು ಅರಿತುಕೊಳ್ಳಬೇಕು. ಪರಿಸರ ದಲ್ಲಾಗುವ ಹವಾಮಾನ ಬದಲಾವಣೆ, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಎಲ್ಲಾ ಹಾನಿಗಳಿಗೂ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಕಾರಣೀಭೂತನಾಗಿದ್ದಾರೆ. ಪರಿಸರ ಸಮತೋಲ ನದಲ್ಲಿದ್ದಾಗ ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಿರುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಸಿದ್ದರು. ಮಣಿಪಾಲ ಎಂಐಟಿಯ ಸಿವಿಲ್ ಇಂಜಿನಿಯ ರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಅಶೋಕ್ ಕಾಮತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ಸೆಣಬಿನ ಚೀಲಗಳನ್ನು ಸಾಂಕೇತಿಕ ವಾಗಿ ವಿತರಿಸಲಾುತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾುತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ಕಿರು ನಾಟಕ ಪ್ರದರ್ಶನವೂ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೆ. ಕೀರ್ತಿಕುಮಾರ್ ಪ್ರಾಸಾವ್ತಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿವಪ್ರಸಾದ್ ಅಡಿಗ ಶಿವಪುರ ಕಾರ್ಯಕ್ರಮ ನಿರೂಪಿಸಿ, ರಾಜೇಶ್ವರಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಎಂಜೆಸಿ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದವರೆಗೆ ನಡೆದ ಪರಿಸರ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಚಾಲನೆ ನೀಡಿದರು.
ಮಕ್ಕಳು ಪರಿಸರದ ರಾಯಭಾರಿಗಳಾಗಲಿ
ಮಕ್ಕಳು ಪರಿಸರ ಸಂರಕ್ಷಣೆಗೆ ರಾಯಭಾರಿ ಗಳಾಗಬೇಕು. ಮಾನವನ ಅಸ್ತಿತ್ವಕ್ಕೆ ಪರಿಸರ ಬೇಕೇ ಬೇಕು.ಪರಿಸರ ಪ್ರಕೃತಿಯ ಬೆನ್ನುಮೂಳೆ ಇದ್ದಂತೆ. ಅದನ್ನು ನಾವು ಸದೃಢವಾಗಿ ಉಳಿಸಿಕೊಳ್ಳಬೇಕು. ಅತಿಯಾದ ರಾಸಾಯನಿಕಗಳ ಬಳಕೆಗೆ ನಾವಿಂದು ಕಡಿವಾಣ ಹಾಕಬೇಕಾಗಿದೆ. ಮಣ್ಣಿನ ಫಲವತ್ತತೆ ಉಳಿಯಲು ಸಾವಯವದ ಬಳಕೆ ಅಗತ್ಯವಿದೆ ಎಂದೂ ಡಾ.ವಿದ್ಯಾಕುಮಾರಿ ತಿಳಿಸಿದರು.
ಜಿಲ್ಲೆಯಲ್ಲಿ ಮಣ್ಣಿನ ಫಲವತ್ತತೆಯ ಪರೀಕ್ಷೆಗೆ 10,000 ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದು, ಇದರಲ್ಲಿ ಶೇ.85ರಷ್ಟು ಸ್ಯಾಂಪಲ್‌ಗಳಲ್ಲಿ ಮಣ್ಣಿನ ಫಲವತತ್ತೆ ಚೆನ್ನಾಗಿತ್ತು. ಉಳಿದ ಶೇ.15ರಲ್ಲಿ ಮಣ್ಣಿನ ಫಲವತ್ತತೆ, ಗುಣಮಟ್ಟ ಇಳಿಮುಖವಾಗಿತ್ತು. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಮಣ್ಣಿನ ಫಲವತ್ತತೆ, ಇಂಗಾಲದ ಪ್ರಮಾಣ ಶೇ.1ಕ್ಕಿಂತ ಕೆಳಗೆ ಕುಸಿಯದಂತೆ ನೋಡಿಕೊಳ್ಳಬೇಕು. ಇದಕ್ಕೆ ಸಾವಯವದ ಬಳಕೆಯನ್ನು ಹೆಚ್ಚಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.







