ಹಿರಿಯಡ್ಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ

ಉಡುಪಿ: ಹಿರಿಯಡಕ-ಪೆರ್ಡೂರು- ಹೆಬ್ರಿ ರಾಷ್ಟ್ರೀಯ ಹೆದ್ದಾರಿ 160 ಎ ಇದರ ಕೊಡಿಬೆಟ್ಟು, ಹಿರಿಯಡಕ, ಪೆರ್ಡೂರು ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಇಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಲದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಅಸಮರ್ಪಕ ಚರಂಡಿಯಿಂದ ಮನೆಗಳಿಗೆ ನೀರು ನುಗ್ಗಿದ್ದು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥಿತವಾದ ಚರಂಡಿಯನ್ನು ಕಾಯ್ದು ಕೊಂಡು ತಕ್ಷಣವೇ ನಿರ್ಮಿಸುವಂತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕಿರು ರಸ್ತೆಗಳನ್ನು ಹಾಳಾಗಿದ್ದು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಶೀಘ್ರವೇ ದುರಸ್ತಿ ಗೊಳಿಸುವಂತೆ ಶಾಸಕರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ಸಂದೀಪ್ ಮಡಿವಾಳ, ಉಪಾಧ್ಯಕ್ಷೆ ಇಂದಿರಾ ಕೆ., ಪೆರ್ಡೂರು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ, ಉಪಾಧ್ಯಕ್ಷ ದೇವು ಪೂಜಾರಿ, ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ರಾಷ್ಟ್ರೀಯ ಹೆದ್ದಾರಿ ಸಹಾಯಕ ಅಭಿಯಂತರ ಮಂಜುನಾಥ್ ನಾಯಕ್ ಹಾಗೂ ಕೊಡಿಬೆಟ್ಟು, ಬೊಮ್ಮರಬೆಟ್ಟು, ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.