ಉಡುಪಿ| ಪಿಎಂಎಫ್‌ಎಂಇಯಡಿ ಸ್ವದ್ಯೋಗಕ್ಕೆ ಅರ್ಜಿ ಆಹ್ವಾನ: ಸಂಸದ ಕೋಟ ಮಾಹಿತಿ

ಉಡುಪಿ, ಜೂ.9: ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕ ಯೋಜನೆಯ (ಪಿಎಂಎಫ್‌ಎಂಇ) ಮೂಲಕ ಶೇ.50 ಸಹಾಯಧನ ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಬಗ್ಗೆ 2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ 250 ಹೊಸ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣಾ ಘಟಕಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಬಾಡಿಗೆ/ಲೀಸ್‌ಗೆ ಮತ್ತು ಸ್ವಂತ ಕಟ್ಟಡ ಅಂಗಡಿ ಕೋಣೆಗಳಲ್ಲಿ ಕಿರು ಉದ್ಯಮವನ್ನು ಸ್ಥಾಪಿಸಬಹುದು. 18 ವಷರ್ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್ ಸೊಸೈಟಿಗಳು, ಖಾಸಗಿ ಮಾಲಕತ್ವದ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳು ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಯೋಜನೆಯ ವೈಶಿಷ್ಟ್ಯ: ಪಿಎಂಎಫ್‌ಎಂಇ ಯೋಜನೆಯ ವಿಶಿಷ್ಟತೆ ಎಂದರೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಶೇ.50ರಷ್ಟು ಸಹಾಯಧನ ವನ್ನು 15 ಲಕ್ಷ ಗರಿಷ್ಠ ಮಿತಿಯೊಂದಿಗೆ ನೀಡಲಾಗುವುದು. ಹಿಂದೆ ಇತರ ಯೋಜನೆಯಡಿಯಲ್ಲಿ ಸಬ್ಸಿಡಿ ಸಹಾಯಧನ ಪಡೆದವರೂ ಈ ಯೋಜನೆಯಲ್ಲಿ ಪಡೆಯಲು ಅವಕಾಶವಿದೆ. ಈಗಾಗಲೇ ಈ ಕಾರ್ಯಕ್ರಮ ದಡಿ 2024-25 ನೇ ಸಾಲಿನಲ್ಲಿ 340ಕ್ಕೂ ಹೆಚ್ಚು ಕಿರು ಘಟಕಗಳು ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದು, ಹಾಲಿ ವಷರ್ ಅಂದರೆ 2025-26ನೇ ಸಾಲಿನಲ್ಲಿ ಇನ್ನೂ 250 ಘಟಕಗಳನ್ನು ಆರಂಭಿಸಲು ಯೋಜಿಸಲಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ: ಆಹಾರ ಸಂಸ್ಕರಣ ಘಟಕದ ಸಹಾಯಧನ ಪಡೆಯಲು ಸರ್ಕಾರದ ಯಾವುದೇ ಇಲಾಖೆಗಳಿಗೆ ಅರ್ಜಿ ಹಾಕಲು ಅಲೆದಾಡಬೇಕಾದ ಅವಶ್ಯಕತೆ ಇಲ್ಲ. ಈ ಯೋಜನೆಗೆ ಉಡುಪಿ ಜಿಲ್ಲೆ ಮಾಹಿತಿಗಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆಯಿಂದ ಸೂರಜ್ ಶೆಟ್ಟಿ ಇವರನ್ನು ನೇಮಿಸಿದೆ. ಸೂರಜ್ ಶೆಟ್ಟಿ (ದೂರವಾಣಿ ಸಂಖ್ಯೆ: 9019075051) ಇವರಿಗೆ ಕರೆ ಮಾಡಿ, ದಾಖಲಾತಿಗಳನ್ನು ನೀಡಿ, ಇವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಸಾಲ ಪಡೆದು ಈ ಯೋಜನೆಯಂತೆ ಸಬ್ಸಿಡಿ ಸಹಾಯಧನ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಯೋಜನೆ ಅಡಿಯಲ್ಲಿ ಬರುವ ಸಂಸ್ಕರಿಸಬಹುದಾದ ಮತ್ತು ಮೌಲ್ಯವರ್ಧನೆ ಮಾಡಬಹುದಾದ ಆಹಾರ ಘಟಕಗಳು ಹೀಗಿವೆ.
*ಮೀನಿನ ಮೌಲ್ಯವರ್ಧಿತ ಪದಾರ್ಥಗಳು *ಹಿಟ್ಟಿನ ಗಿರಣಿಗಳು ಮತ್ತು ಪ್ಯಾಕಿಂಗ್ ಮೆಶಿನ್, * ಎಣ್ಣೆ ಗಾಣಗಳು * ಬೇಕರಿ ಉತ್ಪನ್ನ, *ಅರಿಶಿಣ ಸಂಸ್ಕರಣೆ, * ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ. ನಿಪ್ಪಟ್ಟು, ಪಾನಿಪುರಿ, ಕೋಡುಬಳೆ, ಮಿಕ್ಸರ್, ಚಿಪ್ಸ್ ತಯಾರಿಕೆ ಸಂಸ್ಕರಿಸಿದ ಚಪಾತಿ, ಪರೋಟ, ಪೂರಿ, ಹೋಳಿಗೆ ಉತ್ಪನ್ನಗಳ ತಯಾರಿಕೆ. * ಮಸಾಲ ಪದಾರ್ಥಗಳು/ ಸಾಂಬಾರ್ ಉತ್ಪನ್ನಗಳ ತಯಾರಿಕೆ. * ಹಾಲಿನ ಉತ್ಪನ್ನಗಳ ತಯಾರಿಕೆ * ಸಿಹಿತಿಂಡಿ, ಖಾರ ತಿಂಡಿಗಳ ತಯಾರಿಕೆ * ಬೆಲ್ಲ ಮತ್ತು ಮಿಠಾಯಿ ತಯಾರಿಕೆ ಘಟಕ * ಕಾಫಿ ಪುಡಿ, ಟೀ ಪುಡಿ ಸಂಸ್ಕರಣಾ ಘಟಕ * ಚಾಕ್ಲೇಟ್ ತಯಾರಿಕೆ ಘಟಕ* ಜೇನು ಸಂಸ್ಕರಣಾ ಘಟಕ, * ಸಿರಿಧಾನ್ಯಗಳಿಂದ ಉಪಉತ್ಪನ್ನಗಳ ತಯಾರಿಕೆ * ಡ್ರೈ ಫೂಟ್ಸ್ ಸಂಸ್ಕರಣೆ ಮತ್ತು ಐಸ್ ಕ್ರೀಂ ತಯಾರಿಕೆ * ಹಸಿಮೆಣಸಿನಕಾು ಮತ್ತು ಟೊಮೆಟೋ ಪೇಸ್ಟ್ ಮತ್ತು ಸಾಸ್ ತಯಾರಿಕೆ * ಶಾವಿಗೆ, ರವಾ ನೂಡಲ್ಸ್ ತಯಾರಿಕೆ, * ಕೋಳಿ ಮತ್ತು ಕೋಳಿ ಮಾಂಸ ಸಂಸ್ಕರಣಾ ಘಟಕ, * ಪಶು ಮತ್ತು ಮೀನಿನ ಆಹಾರ.
ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವವರು, ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು ಉಡುಪಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಸೂರಜ್ ಶೆಟ್ಟಿ ಅವರನ್ನು ದೂರವಾಣಿ ಸಂಖ್ಯೆ: 9019075051 ಮೂಲಕ ಸಂಪರ್ಕಿಸಬಹುದೆಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.