ಯಕ್ಷಗಾನ ರಾಜ್ಯ ಕಲೆಯಾಗಿ ಘೋಷಣೆ: ಮೋಹನ್ ಆಳ್ವ ಆಗ್ರಹ

ಕಾರ್ಕಳ, ಜೂ.10: ಯಕ್ಷಗಾನ ರಾಜ್ಯ ಕಲೆಯಾಗಿ ಘೋಷಣೆಯಾಗಬೇಕು. ಈ ಕುರಿತಂತೆ ಯಕ್ಷಗಾನ ಅಕಾಡೆಮಿ, ಕಲಾವಿದರು, ವಿಮರ್ಶಕರು ಎಲ್ಲಾ ಸೇರಿ ಕಾರ್ಯ ಎಸಗಬೇಕು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ಶ್ರೀದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಹಮ್ಮಿಕೊಂಡ 9ನೇ ವರ್ಷದ ಯಕ್ಷಗಾನ ’ರಾಜಾ ದಿಲೀಪ’ ಪ್ರಸಂಗದ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ಶಿಕ್ಷಣದ ಹಂತದಲ್ಲಿಯೇ ಯಕ್ಷಗಾನದಂತಹ ಕಲೆಯನ್ನು ಅಭ್ಯಾಸಿಸಿ ಬೆಳೆಯುವ ಹಾಗೆ ಮಾಡಿದರೆ, ಆ ವ್ಯಕ್ತಿ ಮುಂದೆ ಬಲು ದೊಡ್ಡ ಸೌಂದರ್ಯ ಪ್ರಜ್ಞೆಯುಳ್ಳವನಾಗಿ ಈ ದೇಶದ ಬಹು ದೊಡ್ಡ ಸಂಪತ್ತಾಗುವು ದರಲ್ಲಿ ಸಂಶಯವಿಲ್ಲ. ಯಾರಿಗೆ ಸೌಂದರ್ಯ ಪ್ರಜ್ಞೆ ಇಲ್ಲವೋ ಆ ವ್ಯಕ್ತಿ ಈ ದೇಶಕ್ಕೆ ಬಲು ದೊಡ್ಡ ಅಪಾಯ ಕಾರಿಯಾಗಬಲ್ಲ. ಸೌಂದರ್ಯ ಪ್ರಜ್ಞೆ ಉಳ್ಳವನು ದೇಶವನ್ನು ಪ್ರೀತಿಸುತ್ತಾನೆ, ಕಲೆಯನ್ನು, ಪ್ರಕೃತಿಯನ್ನು ಪ್ರೀತಿಸುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಇಂದು ಯಕ್ಷಗಾನಕ್ಕೆ ಅನೇಕ ಸಂಘಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದು ಅಕಾಡೆಮಿಯ ಕೆಲಸವನ್ನು ಬಹಳಷ್ಟು ಹಗರುವಾಗಿಸಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಸಂಸ್ಥೆಗಳು ಇದೀಗ ಹೆಚ್ಚಾಗಿ ಆರಂಭಗೊಳ್ಳುತ್ತಿರುವುದು ಯಕ್ಷಗಾನ ಕಲೆಯ ಭವಿಷ್ಯ ಭದ್ರವಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಹೇಳಿದರು.
ಯಕ್ಷಗಾನ ಅಕಾಡೆಮಿ ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹ ಉತ್ಸುಕವಾಗಿದೆ. ಯಕ್ಷಗಾನದಲ್ಲಿ ಸಾಧಕರ ಕೊರತೆಯಿಲ್ಲ. ಯೋಗ್ಯ ಗುರು ಗಳನ್ನು ಆರಿಸಿಕೊಂಡು ಅವರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಯನ್ನು ಕಲಿತು ಮುಂದುವರಿದರೆ ಆ ಕಲಾಸಂಸ್ಥೆಗೆ ಉತ್ತಮ ಭವಿಷ್ಯವಿದೆ. ಯಕ್ಷಗಾನಕ್ಕೆ ವಯೋಮಿತಿ ಮತ್ತಿತರ ಕಟ್ಟುಪಾಡುಗಳ ನಿರ್ಬಂಧವಿಲ್ಲ. ಇಲ್ಲಿ ಕಲಿಯಬೇಕು ಎನ್ನುವ ತುಡಿತವೇ ಅವರನ್ನು ಕಲಾವಿದರನ್ನಾಗಿಸುತ್ತದೆ ಎಂದರು.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಗಂಡು ಕಲೆ ಎಂದು ಯಕ್ಷಗಾನವನ್ನು ಗುರುತಿಸಲಾಗಿದೆ ಯಾದರೂ ಅದನ್ನು ಹೆಣ್ಮಕ್ಕಳು ಕಲಿಯಬಾರದು ಎಂಬ ನಿಯಮವಿಲ್ಲ. ಇದೀಗ ಬಹುದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಈ ಕಲೆಯನ್ನು ಅಭ್ಯಾಸಿಸುತ್ತಿರು ವುದು ಸಂತೋಷದ ಸಂಗತಿ. ಹೀಗಾಗಿ ಭವಿಷ್ಯದಲ್ಲಿ ಯಕ್ಷಗಾನ ಕ್ಷಯವಾಗದು, ಅಕ್ಷಯವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮವನ್ನು ವೇದಮೂರ್ತಿ ವಿಘ್ನೇಶ್ ಭಟ್ ಉದ್ಘಾಟಿಸಿದರು. ಸಾಲಿಗ್ರಾಮ ಮೇಳದ ಸಂಚಾಲಕ ಪಿ.ಕಿಶನ್ ಹೆಗ್ಡೆ, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಶೋಧನ್ ಕುಮಾರ್ ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಸುಗ್ಗಿ ಸುಧಾಕರ ಶೆಟ್ಟಿ, ಉದಯ ಶೆಟ್ಟಿ ಹಾಗೂ ಉಡುಪಿಯ ಸಂಗೀತ ವಿದ್ವಾನ್ ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶೋಧನ್ ಕುಮಾರ್ ಶೆಟ್ಟಿ ಮತ್ತು ರೂಪಾರಾಣಿ ದಂಪತಿಯನ್ನು ಗೌರವಿಸಲಾಯಿತು. ಯಕ್ಷಗಾನ ಗುರು ಬಡಾನಿಡಿಯೂರು ಕೇಶವ ರಾವ್ ಮತ್ತು ಯಕ್ಷಗಾನ ಕಲಾವಿದೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಪೂರ್ಣಿಮಾ ಯತೀಶ್ ರೈ ಅವರಿಗೆ ಗುರುವಂದನೆ ನಡೆಯಿತು.
ಶಶಿಕಲಾ ಉದಯ ಶೆಟ್ಟಿ ಸ್ವಾಗತಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘದಿಂದ ‘ರಾಜಾ ದಿಲೀಪ ’ ಯಕ್ಷಗಾನ ಪ್ರಸ್ತುತಿಗೊಂಡಿತು.