ಉಡುಪಿ ನಗರದ ನಿಲ್ದಾಣಗಳಲ್ಲಿ ಎಲ್ಲ ರಿಕ್ಷಾಗಳಿಗೆ ಬಾಡಿಗೆ ಮಾಡಲು ಅವಕಾಶ
ಉಡುಪಿ ನಗರ ರಿಕ್ಷಾ ಚಾಲಕರ ಮತ್ತು ಮಾಲಕರ ಒಕ್ಕೂಟ ನಿರ್ಧಾರ

ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿರುವ ಆಟೋ ರಿಕ್ಷಾ ನಿಲ್ದಾಣಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ನಗರದ ಯಾವುದೇ ನಿಲ್ದಾಣಗಳ ಆಟೋಗಳು ಬಾಡಿಗೆ ಮಾಡಲು ಅವಕಾಶ ಕಲ್ಪಿಸುವ ಕುರಿತು ಉಡುಪಿ ನಗರ ರಿಕ್ಷಾ ನಿಲ್ದಾಣಗಳ ಚಾಲಕರ ಮತ್ತು ಮಾಲಕರ ಒಕ್ಕೂಟ ಒಮ್ಮತದ ನಿರ್ಧಾರ ಕೈಗೊಂಡಿದೆ.
ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ನಗರದ ಎಲ್ಲ ರಿಕ್ಷಾ ನಿಲ್ದಾಣ ಗಳ ಯೂನಿಯನ್ ಅಧ್ಯಕ್ಷಕರು, ಪದಾಧಿಕಾರಿಗಳ ಸಭೆಯಲ್ಲಿ ಒಕ್ಕೂಟವನ್ನು ರಚಿಸಿ ಈ ತೀರ್ಮಾನ ಮಾಡ ಲಾಯಿತು.
ಉಡುಪಿ ನಗರದಲ್ಲಿ ವಲಯ ಒಂದು ಮತ್ತು ವಲಯ ಎರಡರ ಗೊಂದಲದಿಂದ ಕೆಲವೊಂದು ಆಟೋ ಚಾಲಕರ ಮಧ್ಯೆ ನಡೆದ ಗಲಾಟೆ ಯಿಂದ ಆಟೋ ಚಾಲಕರಿಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿ ಆಟೋ ಚಾಲಕರಿಗೆ ತೊಂದರೆ ಆಗಿದೆ. ಈ ಹಿನ್ನೆಲೆಯಲ್ಲಿ ನಗರದ ಆಟೋ ನಿಲ್ದಾಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಏಕಕಾಲದಲ್ಲಿ ಐದು ರಿಕ್ಷಾಕ್ಕಿಂತ ಕಡಿಮೆ ಇದ್ದಲ್ಲಿ ಬೇರೆ ನಿಲ್ದಾಣಗಳ ರಿಕ್ಷಾಗಳು ಬಾಡಿಗೆ ಮಾಡಲು ಅವಕಾಶ ಕಲ್ಪಿಸಿ ನಿರ್ಣಯ ಕೈಗೊಳ್ಳಲಾಯಿತು. ಈ ತೀರ್ಮಾನಕ್ಕೆ ಎಲ್ಲ ಆಟೋ ಚಾಲಕರು ಬದ್ಧರಾಗಿರುವುದಾಗಿ ಸಭೆಯಲ್ಲಿ ಒಕ್ಕೂಟ ಘೋಷಿಸಿತು.
ಸಭೆಯಲ್ಲಿ ಉಡುಪಿ ನಗರ ಠಾಣೆಯ ಎಎಸ್ಸೈ ಸುಭಾಶ್ಚಂದ್ರ ಕೆ., ಯೂನಿಯನ್ ಪದಾಧಿಕಾರಿಗಳಾದ ಶಿವಾನಂದ ಮೂಡಬೆಟ್ಟು, ಶ್ಯಾಮ್, ದೇವೇಂದ್ರ ಗೌಡ, ಸದಾನಂದ, ನಾರಾಯಣ, ವಿಠಲ ಜತ್ತನ್ನ, ವಿಠಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
20 ಹೆಚ್ಚುವರಿ ರಿಕ್ಷಾ ನಿಲ್ದಾಣ: ಎಸ್ಪಿ ಹರಿರಾಮ್ ಶಂಕರ್
ಸಭೆಯ ಬಳಿಕ ಒಕ್ಕೂಟದ ಪದಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ಉಡುಪಿ ನಗರದಲ್ಲಿ ವಲಯ ಒಂದು ಮತ್ತು ಎರಡರ ಗೊಂದಲದಿಂದ ಪ್ರತಿದಿನ ರಿಕ್ಷಾ ಚಾಲಕರ ಮಧ್ಯೆ ಘರ್ಷಣೆ, ಗಲಾಟೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ಈ ಹಿಂದೆ ಇದ್ದ ನಿಯಮದಂತೆ ಎಲ್ಲರೂ ಒಟ್ಟಾಗಿ ದುಡಿಯುವ ನಿರ್ಧಾರಕ್ಕೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಹಕಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಳಿಕ ಮಾತನಾಡಿದ ಎಸ್ಪಿ, ನಗರದಲ್ಲಿ 20 ಹೆಚ್ಚುವರಿ ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸುವ ಕುರಿತು ಈಗಾಗಲೇ ಸ್ಥಳ ಗುರುತು ಮಾಡಲಾಗಿದೆ. ಮುಂದಿನ ಆರ್‌ಟಿಐ ಸಭೆಯಲ್ಲಿ ಕಾನೂನಾತ್ಮಕವಾಗಿ ಮಂಜೂರು ಮಾಡಲಾಗುವುದು. ಆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿ ಎಲ್ಲ ಸಮಸ್ಯೆಗಳನ್ನು ಪರಿಹರಿಸ ಲಾಗುವುದು ಎಂದು ತಿಳಿಸಿದರು.