ಷೇರು ಹೂಡಿಕೆ ನಂಬಿ ಹಣ ಕಳಕೊಂಡ ವ್ಯಕ್ತಿ: ಪ್ರಕರಣ ದಾಖಲು

ಮಂಗಳೂರು, ಜೂ.10: ಷೇರು ಮಾರುಕಟ್ಟೆಯ ಹೂಡಿಕೆಯಿಂದ ಅಧಿಕ ಲಾಭಗಳಿಸಬಹುದು ಎಂಬ ಮಾತನ್ನು ನಂಬಿ ವ್ಯಕ್ತಿಯೊಬ್ಬರು 37,49,500 ರೂ. ಕಳೆದುಕೊಂಡಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಗೆ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ವಾಯ್ಸ್ ಕಾಲ್ ಬಂದಿತ್ತು. ಕರೆ ಮಾಡಿದ್ದ ದಿವ್ಯ ಶಾ ಎಂಬಾಕೆ ನಿರಂತರ ಸಂಪರ್ಕದಲ್ಲಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದಿದ್ದಳು. ತನ್ನ ಸೀನಿಯರ್ ಹೆಡ್ ಮಯಾಂಕ್ ಸಿನ್ಹಾ ಎಂಬಾಕೆ ಈ ಬಗ್ಗೆ ತರಬೇತಿ ನೀಡುತ್ತಾರೆ ಎಂದು ತಿಳಿಸಿ ತನ್ನನ್ನು ಅವರ ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದಾರೆ. ಬಳಿಕ ಷೇರು ಮಾರ್ಕೆಟ್‌ನಲ್ಲಿ ಲಾಭ ಗಳಿಸುವುದು ಹೇಗೆ ಎಂದು ತರಬೇತಿ ನೀಡಿದ್ದಾರೆ. ಎ.18ರಂದು 1,000 ರೂ. ಪಾವತಿಸಿ ಐಬಿಪಿಐ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಆ್ಯಪ್ ಲಾಗಿನ್ ಮಾಡಿದ್ದು, ಬಳಿಕ, ವಿವಿಧ ಖಾತೆಗಳಿಂದ 37,49,500 ರೂ. ವರ್ಗಾವಣೆ ಮಾಡಿದ್ದೆ. ಆ್ಯಪ್‌ನಲ್ಲಿ ಲಾಭಾಂಶ ಸೇರಿ 1,29,71,675 ರೂ. ಹಣ ತೋರಿಸುತ್ತಿದ್ದು, ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ಶೇ.20ರಷ್ಟು ತೆರಿಗೆ ಪಾವತಿಸುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಒತ್ತಾಯಿಸಿದ್ದಾರೆ ಎಂದು ಹಣಕಳಕೊಂಡ ವ್ಯಕ್ತಿಯು ದೂರಿನಲ್ಲಿ ತಿಳಿಸಿದ್ದಾರೆ.