ಕೊರಗರ ಭೂಮಿ ಸಮಸ್ಯೆ ವಿರುದ್ಧ ಪ್ರತಿಭಟನೆ

ಬೈಂದೂರು, ಜೂ.11: ಬೈಂದೂರು ತಾಲೂಕಿನ ಕೊರಗರ ಭೂಮಿ ಸಮಸ್ಯೆ ವಿರುದ್ಧ ಬೈಂದೂರು ತಾಲೂಕು ಆಡಳಿತ ಸೌಧ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ರ್ಯಾಲಿಯು ಪಟ್ಟಣ ಪಂಚಾಯತ್ ನಿಂದ ಬೈಂದೂರು ಪೇಟೆ ಮಾರ್ಗವಾಗಿ ಹೈವೇ ಸರ್ವಿಸ್ ರಸ್ತೆ ಮೂಲಕ ಸಾಗಿತು. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ಮುಖಂಡರಾದ ರಾಜು ಪಡುಕೋಣೆ, ಸುರೇಶ್ ಕಲ್ಲಗಾರ್, ದಸಂಸ ಸದಸ್ಯರು, ಸಮು ದಾಯದ ಮುಖಂಡರು ಭಾಗವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಮನವಿ ಸ್ವೀಕರಿಸಿ, ಕೂಡಲೇ ತುರ್ತು ಸಭೆಯನ್ನು ಕರೆಯುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಕುಂದಾಪುರ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ಗಿರಿಜನ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು. ಕೊರಗರ ಭೂಮಿ ಸಮಸ್ಯೆ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ಎಸಿ ಉಪಸ್ಥಿತಿಯಲ್ಲಿ ಐಟಿಡಿಪಿ ಇಲಾಖೆಯೊಂದಿಗೆ ಬೈಂದೂರು ತಹಶೀಲ್ದಾರ್ ತುರ್ತು ಸಭೆ ಕರೆಯಲು ದಿನಾಂಕ ನಿಗದಿಗೊಳಿಸಲಾಗಿದೆ. ಆದುದರಿಂದ ಪ್ರತಿಭಟನೆಯನ್ನು ಕೈಬಿಡುವಂತೆ ಅವರು ಮನವಿ ಮಾಡಿಕೊಂಡರು.
ಅದರಂತೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು ಹಾಗೂ ಬೇಡಿಕೆ ಈಡೇರದಿದ್ದಲ್ಲಿ ಮುಂದೆಯೂ ಸಂಘಟಿತ ಹೋರಾಟವನ್ನು ಮಾಡು ವುದಾಗಿ ಎಚ್ಚರಿಸಲಾಯಿತು.







