ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಮಳೆ; ಶಿರೂರಿನಲ್ಲಿ ಮೀನು ಸಾಕಣೆ ಘಟಕ ನದಿಪಾಲು

ಉಡುಪಿ/ಬೈಂದೂರು, ಜೂ.13:ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಶಿರೂರಿನಲ್ಲಿ ಮೀನು ಸಾಕಣೆ ಘಟಕ ವೊಂದು ನದಿಪಾಲಾಗಿದ್ದು ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಶಿರೂರಿನ ತಗ್ಗುಪ್ರದೇಶವಾದ ಕಳಿಹಿತ್ಲುವಿನಲ್ಲಿ ಭಾರೀ ಮಳೆಯಿಂದಾಗಿ ಅಪಾರ ಹಾನಿವುಂಟಾಗಿದ್ದು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣ ವಾಗಿದೆ. ಕಳಿಹಿತ್ಲುವಿನಲ್ಲಿ ಹಾದು ಹೋಗುವ ಕುಂಬಾರ ನದಿಯ ಅಬ್ಬರಕ್ಕೆ ಅನೇಕ ದೋಣಿಗಳು ಹಾನಿಗೊಳಗಾಗಿವೆ.
ಈ ನದಿಯಲ್ಲಿ ಮೀನು ಸಾಕಾಣಿಕೆಗೆ ಅಳವಡಿಸಿದ್ದ ಮೀನುಗೂಡು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಜೊತೆಗೆ ಅದರಲ್ಲಿ ಸಾಕಲು ಇಟ್ಟಿದ್ದ ಎರಡು ಸಾವಿರಕ್ಕೂ ಅಧಿಕ ಮೀನುಗಳು ನದಿಯ ಪಾಲಾಗಿವೆ. ನದಿ ನೀರಿನ ಹರಿವು ತೀವ್ರವಾಗಿರುವುದರಿಂದ ದಡದಲ್ಲಿರುವ ಮನೆಗಳು ಸಹ ಅಪಾಯದ ಅಂಚಿಗೆ ನಿಲುಕಿದೆ.
ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರ್ ಮುಹಮ್ಮದ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಡುವರಿ ಗ್ರಾಮದ ದೊಂಬೆಯಲ್ಲಿ ತ್ರಿಶೂಲ ಜಟ್ಟಿಗೇಶ್ವರ ದೈವಸ್ಥಾನದ ಬಳಿ ಗುಡ್ಡ ಕುಸಿದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಗಳು ಕ್ರಮಕ್ಕೆ ಮುಂದಾಗಿದ್ದಾರೆ. ಗುಡ್ಡ ಕುಸಿದ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾ ಗಿದೆ. ಅಪಾಯಕಾರಿ ಎನಿಸಿದ ಮರಗಳನ್ನು ಕಡಿಯಲಾಗಿದೆ.
ಬೈಂದೂರು ತಹಶೀಲ್ದಾರ್ ಭೀಮಸೇನ ಕುಲಕರ್ಣಿ, ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್ , ಮೆಸ್ಕಾಂ ಹಾಗೂ ಪಟ್ಟಣಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮನೆಗಳ ಕುಸಿತ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತಿದ್ದರೂ, ಮಳೆಯೊಂದಿಗೆ ಗಾಳಿ ಬೀಸದಿರುವುದು ಹಾಗೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ -ಕಾರ್ಕಳ, ಹೆಬ್ರಿ ಸುತ್ತಮುತ್ತ- ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಸದ್ಯಕ್ಕೆ ನೆರೆಯ ಭೀತಿ ಕಂಡುಬಂದಿಲ್ಲ. ಆದರೆ ಬ್ರಹ್ಮಾವರ(13.9ಸೆ.ಮೀ.), ಉಡುಪಿ (11.4), ಬೈಂದೂರು (11.4), ಕಾಪು (10.6) ಹಾಗೂ ಕುಂದಾಪುರ (10.2)ಗಳಲ್ಲಿ 10ಸೆ.ಮಿ.ಗೂ ಅಧಿಕ ಮಳೆಯಾಗಿದೆ.
ಜಿಲ್ಲೆಯ ಅನೇಕ ಕಡೆಗಳಲ್ಲಿ ಮನೆಗಳಿಗೆ ಹಾನಿಯಾದ ಪ್ರಕರಣಗಳು ವರದಿಯಾಗಿವೆ. ಇಂದು ಅತೀ ಹೆಚ್ಚು ಪ್ರಕರಣಗಳು ಕುಂದಾಪುರ ತಾಲೂಕಿನಿಂದ ವರದಿಯಾಗಿವೆ. ಕುಂದಾಪುರ ವಡೇರಹೋಬಳಿಯ ಶ್ರೀನಿವಾಸ ದೇವಾಡಿಗ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಆಲದ ಮರವೊಂದು ಉರುಳಿ ಬಿದ್ದಿದ್ದು, ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇದರಿಂದ ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ತಾಲೂಕಿನ ವಂಡ್ಸೆ ಹೋಬಳಿಯ ತಲ್ಲೂರು ಗ್ರಾಮದ ಚಂದು ದೇವಾಡಿಗ ಮನೆ ಮಳೆಯಿಂದ ಭಾಗಶ: ಕುಸಿದಿದೆ. 40,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಹಕ್ಲಾಡಿ ಗ್ರಾಮದ ಹೊಳೆಮಗೆ ಎಂಬಲ್ಲಿ ಅಂತ ಪೂಜಾರಿ ಅವರ ವಾಸ್ತವ್ಯದ ಮನೆಯ ಅಡುಗೆಕೋಣೆ ಭಾರೀ ಮಳೆಗೆ ಕುಸಿದಿದ್ದು 40,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ತ್ರಾಸಿ ಗ್ರಾಮದ ರಾಮ ಪೂಜಾರಿ ಎಂಬವರ ಮನೆಯ ಗೋಡೆ ಮಳೆಗೆ ಕುಸಿದಿದ್ದರೆ, ಕೋಟೇಶ್ವರದ ಸುಶೀಲ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಗೊಂಡಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ.
ಇನ್ನೂ ಎರಡು ದಿನ ರೆಡ್ ಅಲರ್ಟ್: ಹವಾಮಾನ ಇಲಾಖೆ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್‌ನ್ನು ಘೋಷಿಸಿದೆ. ಜೂ.14 ಮತ್ತು 15ರಂದು ಭಾರೀ ಮಳೆಯ ರೆಡ್ ಅಲರ್ಟ್ ನೀಡಿದ್ದರೆ, ನಂತರದ ಮೂರು ದಿನ (ಜೂ.16ರಿಂದ18)ಗಳ ಕಾಲ ಆರೆಂಜ್ ಅಲರ್ಟ್ ನೀಡಲಾಗಿದೆ.
ಉಳಿದಂತೆ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ನಾಳೆಗೆ ರೆಡ್ ಅಲರ್ಟ್, ನಂತರ ಎರಡು ದಿನ ಆರೆಂಜ್ ಅಲರ್ಟ್, ಹಾಸನ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ನಾಳೆಗೆ ಆರೆಂಜ್ ಅಲರ್ಟ್‌ನ್ನು ಘೋಷಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಹಾಗೂ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.







