ಕಾರ್ಕಳ | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಯುವ ಮೋರ್ಚ ಮುಖಂಡ ಸುಹಾಸ್ ಶೆಟ್ಟಿ ಮುಟ್ಲುಪಾಡಿ ವಿರುದ್ಧ ದೂರು

ಕಾರ್ಕಳ: ಬಿಜೆಪಿ ಯುವ ಮೋರ್ಚ ಮುಖಂಡ, ಶಿಕ್ಷಕ ಸುಹಾಸ್ ಶೆಟ್ಟಿ ಮುಟ್ಲುಪಾಡಿ ತನ್ನ ಕಾಲೇಜಿನ ವಿದ್ಯಾರ್ಥಿನಿಗೆ ಪೋನ್ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ.ವಿದ್ಯಾರ್ಥಿ ಸಂಘಟನೆಯು ಪ್ರತ್ಯೇಕವಾಗಿ ಉಪ ಪೋಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಸುಹಾಸ್ ಶೆಟ್ಟಿಯು ಅಪ್ರಾಪ್ತ ವಿದ್ಯಾರ್ಥಿನಿಗೆ ತನ್ನ ಜೊತೆ ಬರುವಂತೆ ಬಲವಂತವಾಗಿ ಒತ್ತಾಯಿಸುತ್ತಿದ್ದಾರೆ. ಈ ಹಿಂದೆಯು ಕೂಡ ಒಂದು ಕಾಲೇಜಿನಲ್ಲಿ ತನ್ನ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಾಲೇಜು ಮಂಡಳಿ ಕೆಲಸದಿಂದ ವಜಾ ಮಾಡಿತ್ತು. ವಿದ್ಯಾರ್ಥಿಗಳು ಭಯದಿಂದ ದೂರು ನೀಡಲು ಹಿಂದೇಟು ಹಾಕುವ ಕಾರಣಕ್ಕಾಗಿ ಇವರು ಮತ್ತೆ ಈ ವರ್ತನೆಯನ್ನು ಪುನರಾವರ್ತಿಸುತ್ತಾರೆ. ಅವರನ್ನು ತಕ್ಷಣ ಬಂಧಿಸಿ ಮೊಬೈಲ್ ವಶಕ್ಕೆ ಪಡೆದರೆ, ಇವರ ಕಿರುಕುಳಕ್ಕೆ ಬಲಿಯಾದವರ ಎಲ್ಲಾ ಮಾಹಿತಿ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಸುಮೋಟೊ ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಪೂಜಾರಿ, ರೀನಾ ಜೂಲಿಯೆಟ್, ಪುರಸಭಾ ಸದಸ್ಯೆ ಪ್ರತಿಮಾ ರಾಣೆ, ಪ್ರಭಾ ಕಿಶೋರ್, ರೆಹಮತ್, ಸುನೀತಾ ಶೆಟ್ಟಿ, ಆಶಾ ಬೈಲೂರು, ಶೋಭಾ ಪ್ರಸಾದ್, ಶೋಭಾ ರಾಣೆ, ರಾಜೇಶ್ವರಿ ಸಾಣೂರು, ಚರಿತ್ರಾ, ಎನ್.ಎಸ್.ಯು.ಐ. ಸಂಘಟನೆಯ ಅಧ್ಯಕ್ಷರಾದ ಗುರುದೀಪ್ ನಿಟ್ಟೆ, ಉದಿತ್ ಶೆಟ್ಟಿಗಾರ್, ಪಧಾದಿಕಾರಿಗಳಾದ ಸಂಸ್ಕೃತ್ ಎನ್. ಆರ್, ಈವನ್ಸ್, ನಿತೀಶ್, ಹಾಗೂ ಸುನೀಲ್ ಭಂಡಾರಿ ಉಪಸ್ಥಿತರಿದ್ದರು.







