ಉಡುಪಿ: ಬಿರುಸು ಕಳೆದುಕೊಂಡ ಮಳೆ, ಅಲ್ಲಲ್ಲಿ ಮನೆ ಹಾನಿ

ಉಡುಪಿ, ಜೂ.14: ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮುಂಗಾರು ಮಳೆ ಇಂದು ತನ್ನ ಬಿರುಸನ್ನು ಕಳೆದುಕೊಂಡಿದ್ದು, ಸಾಧಾರಣ ಮಳೆ ಜಿಲ್ಲೆಯಾದ್ಯಂತ ಬಿದ್ದಿದೆ. ಜಿಲ್ಲೆಯ ಅಲ್ಲಲ್ಲಿ ಮನೆ ಹಾನಿಯ ಐದು ಪ್ರಕರಣಗಳು ದಾಖಲಾಗಿದ್ದು ಸುಮಾರು ಎರಡು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ಶಿರ್ವ ಗ್ರಾಮದ ರತ್ನ ಪೂಜಾರ್ತಿ ಎಂಬವರ ಮನೆ ಗಾಳಿಯಿಂದ ಭಾಗಶ: ಹಾನಿ ಗೊಂಡಿದ್ದು, 80,000ರೂ.ಗಳಿಗೂ ಅಧಿಕ ನಷ್ಟವಾಗಿದೆ. ಕುಂದಾಪುರ ತಾಲೂಕಿನ ಹಕ್ಲಾಡಿಯ ವೆಂಕಮ್ಮ ಎಂಬವರ ವಾಸ್ತವ್ಯದ ಮನೆಗೆ 40,000ರೂ., ನೂಜಾಡಿಯ ಪಾರ್ವತಿ ಶೆಟ್ಟಿ ಅವರ ಮನೆಯ ಗೋಡೆ ಮಳೆಯಿಂದ ಕುಸಿದು 30,000ಕ್ಕೂ ಅಧಿಕ ನಷ್ಟದ ಅದಾಜು ಮಾಡಲಾಗಿದೆ.
ಕಾಪು ತಾಲೂಕು ಪಡು ಗ್ರಾಮದ ಮಂಜು ನಾಯಕ್ ಹಾಗೂ ಉಳಿಯಾರಗೋಳಿಯ ನಾರಾಯಣ ಪೂಜಾರಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ. ಇದರಿಂದ 30,000 ರೂ.ಗಳಿಗೂ ಹೆಚ್ಚಿನ ಹಾನಿಯಾಗಿದೆ.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ನಾಳೆಯೂ ಮುಂದುವರಿಯಲಿದ್ದು, ಮೂರು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಬೀಳುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ.
ರಾಜ್ಯ ಕರಾವಳಿಯ ಬಂದರುಗಳಾದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆಗಳಲ್ಲಿ ಸ್ಥಳೀಯ ಎಚ್ಚರಿಕೆಯ ಸೂಚನೆಯಾದ ಮೂರನೇ ನಂ. ಸಿಗ್ನಲ್ ಹಾರಿಸಲು ತಿಳಿಸಲಾಗಿದೆ.







