‘ಎಸ್‌ಎಎಫ್ ಮೂಲಕ ಕರಾವಳಿ ಸಾಮರಸ್ಯ ರಕ್ಷಿಸುವ ಉದ್ದೇಶ’
ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಡಾ.ಪರಮೇಶ್ವರ್

ಉಡುಪಿ: ಮಂಗಳೂರಿನಲ್ಲಿ ನಿನ್ನೆ ವಿಶೇಷ ಕಾರ್ಯ ಪಡೆಯನ್ನು (ಎಸ್‌ಎಎಫ್) ರಚಿಸುವ ಮೂಲಕ ಕರಾವಳಿ ಜಿಲ್ಲೆಗಳ ಸಾಮರಸ್ಯವನ್ನು ಕಾಪಾಡುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಸರ್ವ ಜನಾಂಗದ ಶಾಂತಿಯ ತೋಟವನ್ನು ರಕ್ಷಿಸಲಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಇಂದು ಉಡುಪಿ ಜಿಲ್ಲೆಗೆ ನೀಡಿದ ಭೇಟಿಯ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಹಿಂದೆ ನಾನು ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಎಂದು ಉಲ್ಲಾಳ ದಿಂದ ಉಡುಪಿಯವರೆಗೆ ಕಾಲ್ನಡಿಗೆ ಜಾಥಾ ಮಾಡಿದ್ದೆ. ಈಗ ವಿಶೇಷ ಕಾರ್ಯಪಡೆಯ ಮೂಲಕ ಕರಾವಳಿಯ ಸಾಮರಸ್ಯ ಕಾಪಾಡುವ ಕಾರ್ಯ ಮಾಡುವುದಾಗಿ ಅವರು ಹೇಳಿದರು.
ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯಾಗಿ ಮಾಡುವುದು ನನ್ನು ಉದ್ದೇಶ ಎಂದ ಅವರು, ಕಾಂಗ್ರೆಸ್ ಭ್ರಷ್ಟಾಚಾರವನ್ನು ತೊಲಗಿಸುವ ಪಕ್ಷ. ಇದನ್ನು ಪಕ್ಷದ ಪ್ರಣಾಳಿಕೆಯಲ್ಲೇ ಹೇಳಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕರಾವಳಿ ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡುವಲ್ಲಿ ಡಾ.ಪರಮೇಶ್ವರ್ ಕೊಡುಗೆ ಬಹಳಷ್ಟಿದೆ. ಗೃಹಸಚಿವರಾಗಿ ಅವರು ಸಮರ್ಥ ವಾಗಿ ಕಾರ್ಯ ನಿರ್ವಹಿಸುತಿದ್ದಾರೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ವನ್ನು ಒಡೆದು ರಾಜಕೀಯ ಮಾಡುವ ಹುನ್ನಾರಕ್ಕೆ ಗೃಹ ಸಚಿವರು ಸರಿಯಾದ ಮಾರ್ಗೋಪಾಯವನ್ನು ಕಂಡು ಹುಡುಕಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಎಂ.ಸಿ.ವೇಣುಗೋಪಾಲ್ ಮಾತನಾಡಿದರು. ಸಭೆಯಲ್ಲಿ ಗೃಹ ಸಚಿವರನ್ನು ಶಾಲು ಹೊದಿಸಿ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಎಂ.ಎ.ಗಫೂರ್, ಗೋಪಾಲ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉದಯಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್, ಮಲ್ಯಾಡಿ ಶಿವರಾಮಶೆಟ್ಟಿ, ದಿನೇಶ್ ಪುತ್ರನ್, ವೆರೋನಿಕಾ ಕರ್ನೇಲಿಯೊ, ರಮೇಶ್ ಕಾಂಚನ್, ಶುಭದರಾವ್, ರಾಘವೇಂದ್ರ ಶೆಟ್ಟಿ, ಸಂತೋಷ್ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಗೀತಾ ವಾಗ್ಲೆ, ಜ್ಯೋತಿ ಹೆಬ್ಬಾರ್, ಪ್ರಖ್ಯಾತ್ ಶೆಟ್ಟಿ, ಮಹಾಬಲ ಕುಂದರ್, ನಾಗೇಶ್ ಉದ್ಯಾವರ, ಹರೀಶ್ ಕಿಣಿ, ಬಿ.ಭುಜಂಗ ಶೆಟ್ಟಿ, ಇಸ್ಮಾಯಿಲ್ ಅತ್ರಾಡಿ, ಕೀರ್ತಿ ಶೆಟ್ಟಿ, ಅಮೃತ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ.ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರೆ, ಜಯರಾಮ್ ನಾಯಕ್ ವಂದಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಹಾಗೂ ಬೆಂಗಳೂರಿನಲ್ಲಿ ಐಪಿಎಲ್ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟವರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.







