ಉಡುಪಿ: ನಿರಂತರ ಮಳೆಗೆ ಅಪರಾಹ್ನದ ಬಳಿಕ ಬಿಡುವು; ತಗ್ಗಿದ ಆತಂಕ
►24 ಗಂಟೆಗಳಲ್ಲಿ ಬೈಂದೂರು, ಕುಂದಾಪುರಗಳಲ್ಲಿ 21ಸೆ.ಮಿ. ಮಳೆ ►25ಕ್ಕೂ ಅಧಿಕ ಮನೆಗಳಿಗೆ ಹಾನಿ; 10 ಲಕ್ಷ ಕ್ಕೂ ಅಧಿಕ ನಷ್ಟ ►ಬೈಂದೂರು ತಾಲೂಕಿನಲ್ಲಿ 11 ಮಂದಿಯ ಸ್ಥಳಾಂತರ

ಉಡುಪಿ, ಜೂ.16: ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಉಡುಪಿ ಜಿಲ್ಲೆ ಅದರಲ್ಲೂ ವಿಶೇಷವಾಗಿ ಬೈಂದೂರು ಹಾಗೂ ಕುಂದಾಪುರ ತಾಲೂಕುಗಳು ನಲುಗಿದ್ದು, ಅಪರಾಹ್ನದ ಬಳಿಕ ಮಳೆ ಬಿಡುವು ಪಡೆದುದರಿಂದ ಜಿಲ್ಲೆಯಾದ್ಯಂತ ನೆರೆಯ ಆತಂಕ ದೂರವಾಗು ವಂತಾಯಿತು. ಆದರೆ ಬಿಡದೇ ಸುರಿದ ಮಳೆಯಿಂದ ಜಿಲ್ಲೆಯ ನದಿಗಳೆಲ್ಲ ತುಂಬಿ ಹರಿಯುತಿದ್ದು, ತಗ್ಗು ಪ್ರದೇಶಗಳೆಲ್ಲಾ ನೀರಿನಿಂದ ಆವೃತ್ತವಾಗಿವೆ.
ರವಿವಾರ ಮುಂಜಾನೆ 8:30ರಿಂದ ಇಂದು ಮುಂಜಾನೆ 8:30ರವರೆಗೆ 24 ಗಂಟೆಗಳ ಅವಧಿಯಲ್ಲಿ ಕುಂದಾಪುರ ಹಾಗೂ ಬೈಂದೂರುಗಳಲ್ಲಿ ತಲಾ 21 ಸೆ.ಮೀ. ಮಳೆ ಬಿದ್ದಿದೆ. ಉಳಿದ ಐದು ತಾಲೂಕು ಗಳಲ್ಲಿ 11ರಿಂದ 13 ಸೆ.ಮೀ. ಮಳೆಯಾಗಿದ್ದು, ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 16.2 ಸೆ.ಮೀ. ಮಳೆ ಸುರಿದಿದೆ.
ಬೈಂದೂರು ಮತ್ತು ಕುಂದಾಪುರ ತಾಲೂಕುಗಳಲ್ಲಿ ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರಿಂದ ನದಿಗಳೆಲ್ಲವೂ ತುಂಬಿ ಹರಿದು ಅನೇಕ ಪ್ರದೇಶಗಳಲ್ಲಿ ನೆರೆ ನೀರು ಮನೆ ಗಳಿಗೆ ನುಗ್ಗುವಂತಾಯಿತು. ಬೈಂದೂರು ತಾಲೂಕಿನ ಕಂಬದಕೋಣೆ (5ಮಂದಿ), ಬೀಜೂರು (3) ಹಾಗೂ ಹೇರೂರು (3) ಗ್ರಾಮಗಳಲ್ಲಿ ಒಟ್ಟು 11 ಮಂದಿಯನ್ನು ಸ್ಥಳಾಂತರಿಸಿದ್ದು, ಇವರು ತಮ್ಮ ಸಂಬಂಧಿಕರ ಮನೆಗೆ ತೆರಳಿರುವುದರಿಂದ ತೆರೆದಿರುವ ಗಂಜಿ ಕೇಂದ್ರಗಳಲ್ಲಿ ಯಾರೊಬ್ಬರೂ ಆಶ್ರಯ ಪಡೆದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲೆ ವಿಕೋಪ ನಿಯಂತ್ರಣ ಕೇಂದ್ರ ತಿಳಿಸಿದೆ.
ಸತತ ಮಳೆ ಹಾಗೂ ಗಾಳಿಯಿಂದ ದಿನದಲ್ಲಿ 30ಕ್ಕೂ ಅಧಿಕ ಮನೆ ಹಾನಿಯ ಪ್ರಕರಣಗಳು ವರದಿ ಯಾಗಿದ್ದು, ಇದರಿಂದ 10 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಜಿಲ್ಲೆಯ ಉಡುಪಿ (1), ಕುಂದಾಪುರ (13), ಬೈಂದೂರು (2), ಕಾಪು(4), ಕಾರ್ಕಳ (3) ಹಾಗೂ ಬ್ರಹ್ಮಾವರ (4)ಗಳಿಂದ ಈ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಬೈಂದೂರು ತಾಲೂಕಿನ ಶಿರೂರಿನ ನಾಗಪ್ಪ ಮೊಗವೀರ ಎಂಬವರ ಮನೆಯ ಮೇಲೆ ಮರ ಬಿದ್ದು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ್ದರೆ, ಬೈಂದೂರಿನ ಮರ್ಲಿ ಎಂಬವರ ಮನೆ ಮಳೆಯಿಂದ ಭಾಗಶ: ಕುಸಿದಿದ್ದು ಒಂದು ಲಕ್ಷ ರೂ.ಗಳಿಗೂ ಆಧಿಕ ನಷ್ಟವಾಗಿದೆ.
ಕಾಪು ತಾಲೂಕಿನ ಶಿರ್ವದ ಗುಲಾಬಿ ಸಫಲಿಗ ಎಂಬವರ ಮನೆ ಮಳೆಯಿಂದ ಹಾನಿಗೊಂಡು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಕುಂದಾಪುರ ಕಸಬಾದ ದೇವರಾಯ ಶೇರಿಗಾರ್ ಎಂಬವರ ಮನೆಗೆ 80,000ರೂ., ಕುಂಭಾಶಿಯ ಗಿರಿಜಾ ಪೂಜಾರ್ತಿ ಮನೆಗೆ 60,000ರೂ., ಕಾರ್ಕಳ ತಾಲೂಕು ಬೋಳದ ದೊಡ್ಡಣ ಪೂಜಾರಿ ಮನೆ ಮೇಲೆ ಮರ ಬಿದ್ದು 50,000ರೂ.ನಷ್ಟು ನಷ್ಟ ಸಂಭವಿಸಿದೆ.
ಕುಂದಾಪುರ ತಾಲೂಕು ಸೇನಾಪುರದ ನೀಲು ಪೂಜಾರಿ ಹಾಗೂ ಆಜ್ರಿಯ ದುರ್ಗಾ ಕುಲಾಲರ ಮನೆಯ ಜಾನುವಾರು ಕೊಟ್ಟಿಗೆಗೆ ಅಪಾರ ಹಾನಿಯಾಗಿದೆ. ಉಳಿದಂತೆ ಜಿಲ್ಲೆಯ ವಿವಿದೆಡೆಯ ಮನೆಗಳಿಗೆ 10 ರಿಂದ 30ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಇನ್ನಷ್ಟು ಮಳೆಯ ಮುನ್ಸೂಚನೆ: ಮುಂದಿನ ಎರಡು ದಿನಗಳ ಕಾಲ (ಜೂ.17,18) ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡದಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಲ್ಲದೇ ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. 19ರಿಂದ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.







