ಇಸ್ರೇಲ್, ಇರಾನ್ಗಳಲ್ಲಿ ಉದ್ವಿಗ್ನ ಪರಿಸ್ಥಿತಿ: ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ತ್ವರಿತ ಕ್ರಮ

Photo credit: PTI
ಉಡುಪಿ: ಇಸ್ರೇಲ್ ಮತ್ತು ಇರಾನ್ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ದೇಶಗಳಲ್ಲಿ ನೆಲೆಸಿರುವ ವಿದೇಶಿಗರಿಗೆ ಆತಂಕ ಉಂಟು ಮಾಡಿದ್ದು, ರಾಜ್ಯದ ಸುಮಾರು 9 ಮಂದಿ ವಿದ್ಯಾರ್ಥಿಗಳು ಇರಾನ್ ದೇಶದ ರಾಜಧಾನಿ ಟೆಹರಾನ್ ಸಮೀಪದಲ್ಲಿರುವ ಶಹೀದ್ ಭಿಸ್ಟಿ ಮೆಡಿಕಲ್ ವಿವಿಯಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದು, ಉದ್ವಿಗ್ನ ಪರಿಸ್ಥಿತಿಯಿಂದ ಆತಂಕಗೊಂಡಿದ್ದಾರೆ.
ಈ ವಿದ್ಯಾರ್ಥಿಗಳ ಪೈಕಿ ಒರ್ವ ವಿದ್ಯಾರ್ಥಿಯಾದ ನದೀಮ್ ಹುಸೇನ್ ಹಾಗೂ ಬೆಂಗಳೂರಿನಲ್ಲಿರುವ ಆತನ ಪೋಷಕರು ಅನಿವಾಸಿ ಭಾರತೀಯ ಸಮಿತಿ ಬೆಂಗಳೂರು ಕಛೇರಿಗೆ ದೂರವಾಣಿ ಮುಖೇನ ಸಂಪರ್ಕಿ ಸಿದ್ದು, ಅವರ ನೋವನ್ನು ತೋಡಿಕೊಂಡಿದ್ದು ಕೂಡಲೇ ಸ್ವದೇಶಕ್ಕೆ ಹಿಂದಿರುಗಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಕೂಡಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಇರಾನ್ನಲ್ಲಿ ನೆಲೆಸಿರುವ ಈ ವಿದ್ಯಾರ್ಥಿ ಗಳನ್ನು ಕೂಡಲೇ ಕರೆತರಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ. ಅಲ್ಲದೇ ದೂರವಾಣಿ ಮುಖೇನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಪ್ರಕಟಣೆ ತಿಳಿಸಿದೆ.







