ಅತಿಸಾರ ಭೇದಿಯಿಂದ ಮರಣ ಪ್ರಮಾಣ ಶೂನ್ಯಕ್ಕೆ ಪ್ರಯತ್ನ: ಡಿಎಚ್‌ಓ
ಉಡುಪಿಯಲ್ಲಿ ಅತಿಸಾರ ವಿರುದ್ಧ ಅಭಿಯಾನ

ಉಡುಪಿ, ಜೂ.16: ಜಿಲ್ಲೆಯಾದ್ಯಂತ ಜೂನ್ 16ರಿಂದ ಜುಲೈ 31ರ ವರೆಗೆ ನಡೆಯುವ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ ಕರೆ ನೀಡಿದ್ದಾರೆ.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ-2025ರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ನಡೆಯಲಿರುವ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು 0-5 ವರ್ಷದೊಳಗಿನ ಮಕ್ಕಳಿರುವ ಮನೆಗಳನ್ನು ಭೇಟಿ ಮಾಡಿ, ಎರಡು ಓಆರ್‌ಎಸ್ ದ್ರಾವಣದ ಪ್ಯಾಕ್ ಹಾಗೂ 14 ಜಿಂಕ್ ಮಾತ್ರೆಗಳನ್ನು ವಿತರಿಸಲಿದ್ದಾರೆ. ಇದರೊಂದಿಗೆ ಕೈತೊಳೆಯುವ ವಿಧಾನ, ಓಆರ್‌ಎಸ್ ದ್ರಾವಣವನ್ನು ತಯಾರಿಸುವ ಕುರಿತು ತಾಯಂದಿರಿಗೆ ಮಾಹಿತಿ ಯನ್ನೂ ನೀಡಲಿದ್ದಾರೆ. ಮಕ್ಕಳಲ್ಲಿ ಅತಿಸಾರದಿಂದ ಉಂಟಾಗುವ ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡವಲ್ಲಿ ಈ ಅಭಿಯಾನವು ಸಹಕಾರಿಯಾಗಲಿದೆ ಎಂದರು.
ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಾಗ ಓಆರ್‌ಎಸ್ ದ್ರಾವಣ ಹಾಗೂ ಜಿಂಕ್ ಮಾತ್ರೆಗಳನ್ನು ನೀಡುವು ದರಿಂದ ನಿರ್ಜಲೀಕರಣವನ್ನು ತಡೆಗಟ್ಟುವು ದರೊಂದಿಗೆ, ರೋಗನಿರೋಧಕ ಶಕ್ತಿ ಹೆಚ್ಚಿಸಿ, ಮಕ್ಕಳು ವೇಗ ವಾಗಿ ಚೇತರಿಕೆ ಕಂಡುಕೊಳ್ಳುತ್ತಾರೆ. ತೀವ್ರ ನಿರ್ಜಲೀಕರಣ ಇರುವ ಪ್ರಕರಣಗಳಿದ್ದಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ಡಿಎಚ್‌ಓ ಹೇಳಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಅಮರನಾಥ ಶಾಸ್ತ್ರೀ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಮಾತನಾಡುತ್ತಾ, ಬೇಸಿಗೆಯ ಕೊನೆಯಲ್ಲಿ ಹಾಗೂ ಮಳೆಗಾಲದ ಪ್ರಾರಂಭದಲ್ಲಿ ಸಾಮಾನ್ಯವಾಗಿ 0-5 ವರ್ಷದ ಮಕ್ಕಳಲ್ಲಿ ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ವಾಂತಿ-ಭೇದಿಯಂತಹ ಪ್ರಕರಣಗಳು ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ. ಇಂತಹ ಅಪಾಯಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಸರ್ವಸನ್ನದ್ಧವಾಗಿದೆ ಎಂದರು.
ಸಾರ್ವಜನಿಕರು ಹಾಗೂ ಪೋಷಕರು ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಕ್ಕಳಿಗೆ ಕುದಿಸಿ, ಆರಿಸಿದ ನೀರನ್ನು ಸೇವಿಸಲು ನೀಡಬೇಕು. ಆಗ ಮಾತ್ರ ರೋಗಗಳಿಂದ ದೂರ ಉಳಿಯಲು ಸಾಧ್ಯ. ಓಆರ್‌ಎಸ್ ದ್ರಾವಣವು ಅತಿಸಾರ ಭೇದಿಯಿಂದ ಬಳಲುತ್ತಿರುವ 0-5 ವರ್ಷದೊಳಗಿನ ಮಗುವಿನ ಜೀವ ಉಳಿಸುವ ದ್ರಾವಣವಾಗಿದೆ. ಈ ಅಭಿಯಾನದಲ್ಲಿ ಮನೆ ಮನೆ ಭೇಟಿ ನೀಡುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಓಆರ್‌ಎಸ್ ದ್ರಾವಣ ಸೇವಿಸುವ ಬಗ್ಗೆ, ಜಿಂಕ್ ಮಾತ್ರೆಗಳನ್ನು ತೆಗೆದು ಕೊಳ್ಳುವ ಕುರಿತು, ಆಹಾರ ಸೇವನೆ ಮುನ್ನ ಕೈಗಳನ್ನು ತೊಳೆದುಕೊಳ್ಳುವ, ಪೌಷ್ಠಿಕ ಆಹಾರ ಸೇವನೆ, ನೈರ್ಮಲ್ಯದ ಬಗ್ಗೆ ಮಕ್ಕಳ ತಾಯಂದಿರಿಗೆ ಮಾಹಿತಿ ನೀಡಲಿದ್ದಾರೆ ಎಂದು ಡಾ.ಶಾಸ್ತ್ರಿ ವಿವರಿಸಿದರು.
ಜಿಲ್ಲಾ ಸರ್ಜನ್ ಡಾ. ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ತೀವ್ರತರ ಅತಿಸಾರ ಭೇದಿ ಕೊನೆಗೊಳಿಸುವ ಅಭಿಯಾನ ಕುರಿತ ಮಾಹಿತಿಯನ್ನೊಳಗೊಂಡ ಭಿತ್ತಿಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜಗೋಪಾಲ್ ಭಂಡಾರಿ, ಪ್ರಸೂತಿ ತಜ್ಞೆ ಡಾ. ಉಷಾ ಭಟ್, ಮಕ್ಕಳ ತಜ್ಞರಾದ ಡಾ. ಸಂದೀಪ್, ಡಾ. ಮಹಾದೇವ ಭಟ್, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಜ್ಯೋತ್ಸಾ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ನಿರೂಪಿಸಿ, ಪ್ರಭಾರ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.







