‘ದಲಿತ ದೌರ್ಜನ್ಯ ಆರೋಪಿಗಳಿಗೆ ತನಿಖಾಧಿಕಾರಿಗಳೆ ಸಹಕಾರ‘
ಉಡುಪಿ ಎಸ್ಪಿ ಭೇಟಿ ಮಾಡಿದ ಅಂಬೇಡ್ಕರ್ ಯುವಸೇನೆ ಆರೋಪ

ಉಡುಪಿ, ಜೂ.17: ಜಿಲ್ಲೆಯಲ್ಲಿ ದಲಿತ ದೌರ್ಜನ್ಯ ಹೆಚ್ಚುತ್ತಿದ್ದು, ದಲಿತರ ಮೇಲೆ ದಬ್ಬಾಳಿಕೆ ಮಾಡುವವರ ಕೈಯಲ್ಲಿ ರಾಜಕೀಯ ಅಧಿಕಾರ ಇದೆ. ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸದೆ ಜಾಮೀನು ಪಡೆಯುವಲ್ಲಿ ತನಿಖಾಧಿಕಾರಿಗಳೇ ಸಹಕರಿಸುತ್ತಿದ್ದಾರೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.
ಅಂಬೇಡ್ಕರ್ ಯುವಸೇನೆಯ ನೇತೃತ್ವದಲ್ಲಿ ನಿಯೋಗ ಸೋಮವಾರ ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಧಿಕಾರಿ ಹರಿರಾಂ ಶಂಕರ್ ಅವರನ್ನು ಭೇಟಿ ಮಾಡಿದ ವೇಳೆ ಅವರು ಮಾತನಾಡುತಿದ್ದರು.
ಪೊಲೀಸರು ಕಾನೂನು ಸುವ್ಯವಸ್ಥೆಯ ಪಾಲನೆಯ ಹೊಣೆ ಹೊತ್ತ ಸರಕಾರದ ಕೈಕಾಲುಗಳು, ನ್ಯಾಯವ್ಯವಸ್ಥೆ ಅನಿವಾರ್ಯ ಅಂಗ. ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆ ಪೊಲೀಸರ ಕರ್ತವ್ಯವಾಗಲಿ ಎಂದು ಅವರು ಹೇಳಿದರು. ದೌರ್ಜನ್ಯಕ್ಕೆ ಒಳಗಾದ ದಲಿತ ಹೆಣ್ಣು ಮಕ್ಕಳ ಹೆಸರನ್ನು ಮಾಧ್ಯಮದಲ್ಲಿ ಪ್ರಕಟಿಸದಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ನಿಯೋಗದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಕೃಷ್ಣ ಬಂಗೇರ ಪಡುಬಿದ್ರಿ, ಹರೀಶ್ ಸಾಲ್ಯಾನ್, ವಸಂತ ಪಾದೆಬೆಟ್ಟು, ಸಂಜೀವ ಬಳ್ಕೂರ್, ರವಿರಾಜ್ ಲಕ್ಷ್ಮೀನಗರ, ಸುಜೀತ್ ಕಂಚಿನಡ್ಕ, ದಯಾಕರ್ ಮಲ್ಪೆ, ಸುಶೀಲ್ ಕೊಡವೂರು, ಸಾಧು ಚಿಟ್ಪಾಡಿ, ಅರುಣ್ ಸಾಲ್ಯಾನ್, ಭಗವಾನ್ ಮಲ್ಪೆ, ಸಂತೋಷ್ ಕಪ್ಪೆಟ್ಟು, ದೀಪಕ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.





