ಆಗುಂಬೆ ಘಾಟಿಯಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ

ಹೆಬ್ರಿ, ಜೂ.17: ಭಾರೀ ಗಾಳಿಮಳೆಯಿಂದಾಗಿ ಉಡುಪಿ- ಶಿವಮೊಗ್ಗ ಸಂಪರ್ಕಿಸುವ ಆಗುಂಬೆ ಘಾಟಿ 166 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ರಸ್ತೆಗೆ ಮರ ಬಿದ್ದ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಆಗುಂಬೆ ಘಾಟಿಯ ಮೇಲ್ಭಾಗದಲ್ಲಿರುವ ಚೆಕ್‌ಪೋಸ್ಟ್ ಸಮೀಪ ಬೃಹತ್ ಆಕಾರದ ಮರ ಗಾಳಿಮಳೆಯಿಂದ ರಸ್ತೆ ಬಿದ್ದಿದ್ದು, ಇದರಿಂದ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೇಲ್ಭಾಗದಲ್ಲಿ ಆಗುಂಬೆಯ ವರೆಗೆ ಹಾಗೂ ಇನ್ನೊಂದು ಭಾಗದಲ್ಲಿ ಸೋಮೇಶ್ವರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂತು.
ಕೂಡಲೇ ಸಂಬಂಧಪಟ್ಟವರು ಆಗಮಿಸಿದ ಮರ ತೆರವು ಕಾರ್ಯಾಚರಣೆ ನಡೆಸಿದರು. ಸುಮಾರು ಒಂದೂವರೆ ಗಂಟೆ ಅವಧಿಯ ಬಳಿಕ ಮರವನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದರಿಂದ ವಾಹನದಲ್ಲಿನ ಪ್ರಯಾಣಿಕರು ತೀರಾ ತೊಂದರೆ ಅನುಭವಿಸು ವಂತಾಯಿತು.
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಆಗುಂಬೆ ಚೆಕ್‌ಪೋಸ್ಟ್ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್ ಗಾತ್ರದ ಮರದಿಂದಾಗಿ ಮಣಿಪಾಲ ಹಾಗೂ ಮಂಗಳೂರಿನ ವೆನ್‌ಲಾಕ್‌ಗಳಿಗೆ ರೋಗಿಗಳನ್ನು ಕರೆದೊ ಯ್ಯುತಿದ್ದ ಹಲವು ಅಂಬುಲೆನ್ಸ್ ವಾಹನಗಳು ಸಹ ಗಂಟೆಗಟ್ಟಲೆ ನಿಲ್ಲುವ ಪರಿಸ್ಥಿತಿ ಎದುರಾಯಿತು. ಟ್ರಾಫಿಕ್ ಜಾಮ್‌ನಲ್ಲಿ ಹಲವು ಅಂಬುಲೆನ್ಸ್‌ಗಳು ಇರುವುದು ಕಂಡುಬಂತು. ಇದರಿಂದ ರೋಗಿಗಳು ಹಾಗೂ ಸಂಬಂಧಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.
ಬೃಹತ್ ಮರವನ್ನು ತೆರವುಗೊಳಿಸಲು ಸ್ಥಳೀಯರು ಅರಣ್ಯ ಇಲಾಖೆಯವರ ಜೊತೆ ಕೈಜೋಡಿಸಿದರು. ಮಾರ್ಗ ವಾಹನ ಸಂಚಾರಕ್ಕೆ ತೆರವುಗೊಳ್ಳುವ ವೇಳೆ ರಸ್ತೆಯ ಎರಡೂ ಕಡೆಗಳಲ್ಲಿ ಮೈಲುಗಟ್ಟಲೆ ವಾಹನಗಳ ಸಾಲು ನಿಂತಿರುವುದು ಕಂಡುಬಂತು.







