ಭಾರೀ ಮಳೆಗೆ ಕುಚ್ಚೂರು- ಹೆಬ್ರಿ ರಸ್ತೆ ಸಂಪರ್ಕ ಕಡಿತ: ಇಲಾಖಾಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಹೆಬ್ರಿ, ಜೂ.17: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಬ್ರಿ -ಕುಚ್ಚೂರು ಸಂಪರ್ಕಿಸುವ ಬದಲಿ ರಸ್ತೆ ಸಂಪರ್ಕವು ಕಡಿತಗೊಂಡಿದ್ದು ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರುವು ದರಿಂದ ರಸ್ತೆ ಮಳೆಗೆ ಕೊಚ್ಚಿಕೊಂಡು ಹೋಗಿದೆ.
ರಸ್ತೆ ಸಂಪರ್ಕ ಕಡಿತಕ್ಕೆ ಇಲಾಖಾಧಿಕಾರಿ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮಂಗಳವಾರ ಸ್ಥಳೀಯರು ಹೆಬ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮಾತನಾಡಿ, ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿ ಕುಚ್ಚೂರು ಕಂಚರ್ಕಳ ಎಂಬಲ್ಲಿ ಕಿರು ಸೇತುವೆ ಸಿಥಿಲಗೊಂಡಿದೆ. ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದ್ದು, ಇದರ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಸರಕಾರ ನೂತನ ಸೇತುವೆಗೆ ಸುಮಾರು 2ಕೋಟಿ ರೂ.ಅನುದಾನ ಬಿಡುಗಡೆ ಮಾಡಿತ್ತು ಎಂದರು.
ಈ ಕಾಮಗಾರಿಯನ್ನು ಮಳೆಗಾಲದಲ್ಲಿ ಆರಂಭಿಸಿದ ಪರಿಣಾಮ ನಿರಂತರವಾಗಿ ಸುರಿದ ಭಾರೀ ಮಳೆಗೆ ಈ ಬದಲಿ ರಸ್ತೆ ಕೊಚ್ಚಿಕೊಂಡು ಹೋಗಿದೆ. ಈ ಬಗ್ಗೆ ಕಳೆದ 9 ತಿಂಗಳ ಹಿಂದೆ ಸಂಬಂಧಪಟ್ಟ ಅಧಿಕಾರಿ ಗಳ ಗಮನ ತಂದು ಮಳೆಗಾಲ ಮೊದಲೇ ಕಾಮಗಾರಿ ನಡೆಸುವಂತೆ ತಿಳಿಸಲಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಸುಮಾರು 10 ಗ್ರಾಮದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ತೊಂದರೆ ಅನುಭವಿಸು ವಂತಾಗಿದೆ ಎಂದು ಅವರು ದೂರಿದರು.
ಇದರಿಂದ ಹೆಬ್ರಿಯಿಂದ ಕುಚ್ಚೂರು ಮಾಂಡಿಮೂರ್ ಕೈ ಸಂಪರ್ಕಿಸುವ ವಾಹನಗಳು ಸೀತಾನದಿ ಸೋಮೇಶ್ವರ ಮಾರ್ಗದಲ್ಲಿ ಅಥವಾ ಬೇಳಂಜೆ ಮೀನುಗದ್ದೆ ಆರ್ಡಿ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಈ ಮಾರ್ಗದಲ್ಲಿ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ದಿನ ನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಕಾರ್ಮಿಕರು ತೊಂದರೆ ಅನುಭವಿಸ ಬೇಕಾಗಿದೆ. ಆದುದರಿಂದ ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸದಿದ್ದರೆ ಮುಂದೆ ರಾಜ್ಯ ಹೆದ್ದಾರಿಯನ್ನು ತಡೆದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಮಿಥನ್, ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ, ಯಾರಿಗೂ ತೊಂದರೆ ಆಗದಂತೆ ಬದಲಿ ರಸ್ತೆಯನ್ನು ಎರಡು ದಿನಗಳಲ್ಲಿ ದುರಸ್ತಿ ಮಾಡಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ಸುಧಾಕರ ಶೆಟ್ಟಿ ದೇವಳಬೈಲ್, ಬಾಲಕೃಷ್ಣ್ಣ ಶೆಟ್ಟಿ, ಮಾಂಡಿಮೂರಕೈ ರಿಕ್ಷಚಾಲಕ ಮಾಲಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.







