ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಅಧಿಕಾರ ಸ್ವೀಕಾರ

(ಸ್ವರೂಪ ಟಿ.ಕೆ)
ಉಡುಪಿ, ಜೂ.18: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಇಂದು ಅಪರಾಹ್ನ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರಿಂದ ಅಧಿಕಾರ ಸ್ವೀಕರಿಸಿದರು.
55 ವರ್ಷ ಪ್ರಾಯದ ಅನುಭವಿ ಅಧಿಕಾರಿಯಾಗಿರುವ ಸ್ವರೂಪ ಅವರು ಈ ಹಿಂದೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ -ಗವರ್ನೆನ್ಸ್ನ ನಿರ್ದೇಶಕಿಯಾಗಿ ಕಳೆದ ಫೆಬ್ರವರಿ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಂಗಳೂರಿನ ಜಿಎಸ್ಕೆಎಸ್ಜೆಟಿಐನಿಂದ ಟೈಕ್ಸ್ಟೈಲ್ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಹಾಗೂ ದಿಲ್ಲಿಯ ಐಐಟಿಯಿಂದ ಟೆಕ್ಸ್ಟೈಲ್ ಇಂಜಿನಿಯರಿಂಗ್ನಲ್ಲಿ ಎಂಟೆಕ್ ಪದವಿ ಪಡೆದಿರುವ ಸ್ವರೂಪ ಟಿ.ಕೆ. 1994ರಲ್ಲಿ ಸರಕಾರದ ಸೇವೆಗೆ ಸೇರ್ಪಡೆಗೊಂಡಿದ್ದರು. 2012ರಲ್ಲಿ ಐಎಎಸ್ ಆಗಿ ಬಡ್ತಿ ಪಡೆದ ಅವರು ಸರಕಾರದ ವಿವಿಧ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ 2023ರ ಎಪ್ರಿಲ್ನಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ನ ಸಿಇಓ ಆಗಿ ನಿಯುಕ್ತಿಗೊಂಡಿದ್ದರು.
2025ರ ಫೆಬ್ರವರಿ ತಿಂಗಳಲ್ಲಿ ಸ್ವರೂಪ ಟಿ.ಕೆ. ಅವರನ್ನು ಆರ್ಡಿಪಿಆರ್ನ ಇ-ಗವರ್ನೆನ್ಸ್ ನಿರ್ದೇಶಕಿ ಯಾಗಿ ವರ್ಗಾಯಿಸಲಾಗಿತ್ತು. ನಿರ್ಗಮನ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದ್ದು, ಯಾವುದೇ ಹುದ್ದೆಯನ್ನು ತೋರಿಸಲಾಗಿಲ್ಲ.







