ಉಡುಪಿ| ಕಾರ್ಮಿಕನನ್ನು ಒಂದು ಗಂಟೆ ಒಂಟಿಕಾಲಿನಲ್ಲಿ ನಿಲ್ಲಿಸಿದ ಮಾಲಕ !
ಫ್ಯಾಕ್ಟರಿಗೆ ನಷ್ಟ ಮಾಡಿರುವ ಆರೋಪ

ಶಂಕರನಾರಾಯಣ, ಜೂ.18: ಫ್ಯಾಕ್ಟರಿಗೆ ನಷ್ಟ ಮಾಡಿರುವುದಾಗಿ ಆರೋಪಿಸಿ ಮಾಲಕ, ಕಾರ್ಮಿಕನೋರ್ವನನ್ನು ಗೇಟ್ ಬಳಿ ಒಂದು ಗಂಟೆಗಳ ಕಾಲ ಒಂಟಿ ಕಾಲಿನಲ್ಲಿ ನಿಲ್ಲಿಸಿ ಶಿಕ್ಷೆ ವಿಧಿಸಿರುವ ಅಮಾನವೀಯ ಘಟನೆ ಬ್ರಹ್ಮಾವರ ತಾಲೂಕಿನ ವಂಡಾರಿನಲ್ಲಿ ನಡೆದಿದೆ.
ವಂಡಾರಿನ ಕೃಷ್ಣ ಪ್ರಸಾದ್ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ ಶಿರೂರು ಗ್ರಾಮದ ಪ್ರವೀಣ್ (29) ಎಂಬವರು ಜೂ.16ರಂದು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದರು. ಮಧ್ಯರಾತ್ರಿ 12:30ಕ್ಕೆ ಸುಪ್ರವೈಸರ್ ಸುರೇಶ್ ಕರೆ ಮಾಡಿ ಫ್ಯಾಕ್ಟರಿಯಲ್ಲಿ ಒಂದು ಪೇಸ್ ಕರೆಂಟ್ ಇಲ್ಲ ಎಂದು ತಿಳಿಸಿದರು.
ಬಳಿಕ ಜೂ.17ರಂದು ಬೆಳಿಗ್ಗೆ ಮತ್ತೆ ಪ್ರವೀಣ್‌ಗೆ ಕರೆ ಮಾಡಿದ ಸುರೇಶ್ ಕರೆಂಟ್ ಲೈನ್ ಸರಿ ಇಲ್ಲ ಎಂದು ಹೇಳಿದರು. ಆ ಹಿನ್ನೆಲೆಯಲ್ಲಿ ಪ್ರವೀಣ್ ಲೈನ್‌ಮ್ಯಾನ್‌ಗೆ ಕರೆಮಾಡಿ ವಿಚಾರಿಸಿ, ಬಳಿಕ ಫ್ಯಾಕ್ಟರಿಗೆ ಹೋದರು. ಆಗ ಫ್ಯಾಕ್ಟರಿಯ ಎಚ್‌ಆರ್ ಚಂದ್ರಶೇಖರ ಪ್ರವೀಣ್‌ರನ್ನು ತಡೆದು ನಿಲ್ಲಿಸಿ ಒಳಗೆ ಬಿಡಬಾರದು ಎಂಬುದಾಗಿ ಮಾಲಕ ಸಂಪತ್ ಶೆಟ್ಟಿ ಆದೇಶ ನೀಡಿದ್ದಾರೆ ಎಂದು ಹೇಳಿದರು.
ಅಲ್ಲದೆ ಪ್ರವೀಣ್ ಅವರ ಬೈಕ್ ಹಾಗೂ ಮೊಬೈಲನ್ನು ಕಿತ್ತುಕೊಂಡು ಗೇಟಿನ ಬಳಿ ನಿಲ್ಲಿಸಿದರು. ನಂತರ ಬಂದ ಸಂಪತ್ ಶೆಟ್ಟಿ, ಪ್ರವೀಣ್‌ಗೆ ಅವಾಚ್ಯವಾಗಿ ಬೈದು ನಿನ್ನಿಂದಾಗಿ ನನ್ನ ಫ್ಯಾಕ್ಟರಿಯ ಡಿಸೇಲ್ ನಷ್ಟವಾಗಿದೆ ಎಂದು ಹೇಳಿ ಒಂದು ಗಂಟೆಗಳ ಕಾಲ ಒಂಟಿಕಾಲಿನಲ್ಲಿ ನಿಲ್ಲಿಸಿದರೆಂದು ಆರೋಪಿಸಲಾಗಿದೆ. ಇದರಿಂದ ನಿತ್ರಾಣಗೊಂಡ ಪ್ರವೀಣ್ ಅವರನ್ನು ಅವರ ಚಿಕ್ಕಪ್ಪ ಶಂಕರ ನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







