ಮಾವಿನಕಟ್ಟೆ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಾಮೂಹಿಕ ವರ್ಗಾವಣೆ: ವಿದ್ಯಾರ್ಥಿಗಳು, ಪೋಷಕರಿಂದ ಪ್ರತಿಭಟನೆ
ಶಿಕ್ಷಕರ ಮರುನೇಮಕಕ್ಕೆ ಆಗ್ರಹ

ಕುಂದಾಪುರ, ಜೂ.18: ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿರುವ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿದ್ದ ಎಲ್ಲ ಶಿಕ್ಷಕರನ್ನು ಸಾಮೂಹಿಕ ವರ್ಗಾವಣೆಗೊಳಿಸಿ ಬೇರೆ ಶಿಕ್ಷಕರನ್ನು ನಿಯೋಜಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪೋಷಕರೊಂದಿಗೆ ಸೇರಿ ಶಾಲೆಯ ಎದುರು ಇಂದು ಪ್ರತಿಭಟನೆ ನಡೆಸಿದರು. ಮೊದಲಿದ್ದ ಶಿಕ್ಷಕರನ್ನು ಮರು ನಿಯೋಜಿಸು ವವರೆಗೆ ತರಗತಿಗೆ ತೆರಳುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಕೊಲ್ಲೂರು ದೇವಳದ ಆಡಳಿತಕ್ಕೊಳ ಪಡುವ ಮಾವಿನಕಟ್ಟೆಯ ಈ ಪ್ರೌಢ ಶಾಲೆಯಲ್ಲಿ ಗುಲ್ವಾಡಿ, ಮಾವಿನಕಟ್ಟೆ, ನೆಂಪು, ಕರ್ಕಿ, ತಲ್ಲೂರು, ಸೌಕೂರು, ಹಟ್ಟಿಯಂಗಡಿ, ನೇರಳಕಟ್ಟೆಯಿಂದ ಬರುವ 185 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 56 ವಿದ್ಯಾರ್ಥಿಗಳು ಹೊಸದಾಗಿ ದಾಖಲಾಗಿದ್ದು ಎಸೆಸೆಲ್ಸಿಯಲ್ಲಿ 50 ವಿದ್ಯಾರ್ಥಿಗಳಿದ್ದಾರೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಈ ಹಿಂದಿದ್ದ ಮುಖ್ಯೋಪಧ್ಯಾಯರ ಸಹಿತ ಒಂಬತ್ತು ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದು ಈ ಶಾಲೆಗೆ ಬೇರೆಬೇರೆ ಶಾಲೆಯ ಶಿಕ್ಷಕರನ್ನು ನಿಯೋಜಿಸಲಾಗಿದೆ.
ಹೊಸದಾಗಿ ಬಂದ ಶಿಕ್ಷಕರಿಂದ ಹತ್ತನೆ ತರಗತಿ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆ ಯಾಗಲಿದೆ ಎಂದು ಪೋಷಕರು ಆರೋಪಿಸಿ ದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕೂಡ ತಮಗೆ ಹಿಂದಿದ್ದ ಒಂದಷ್ಟು ಶಿಕ್ಷಕರನ್ನು ನೇಮಿಸಿ ಎಂದು ಅವಲತ್ತುಕೊಂಡಿದ್ದಾರೆ. ಕೆಲ ಹೊತ್ತು ತರಗತಿಗಳಿಂದ ಹೊರಗು ಳಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಈಡೇರುವ ತನಕ ತರಗತಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಕೆಲವೇ ದಿವಸಗಳಲ್ಲಿ ಪರೀಕ್ಷೆ ಬರುತ್ತಿದ್ದು ಕೆಲವು ಪಾಠಗಳಿನ್ನು ಆರಂಭವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಹಿರಿಯರಾದ ಚೆರಿಯಬ್ಬ ಸಾಹೇಬ್ ಸ್ಥಳಕ್ಕೆ ಭೇಟಿ ನೀಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿರುವುದಾಗಿಯೂ, ಮೂರು ದಿನದೊಳಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಆಡಳಿತ ಕಮಿಟಿ ತಿಳಿಸಿರುವುದಾಗಿ ಪೋಷಕರಿಗೆ ಮಾಹಿತಿ ನೀಡಿ ಮಕ್ಕಳನ್ನು ತರಗತಿಗೆ ತೆರಳುವಂತೆ ಮನವಿ ಮಾಡಿದರು. ಅದರಂತೆ ಮಕ್ಕಳು ತರಗತಿಗೆ ತೆರಳಿದರು.
ಬಳಿಕ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರ ಅಹವಾಲು ಆಲಿಸಿದರು. ಶಾಲೆಯ ಎಲ್ಲಾ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದರ ಬಗ್ಗೆ ಪೋಷ ಕರು ಅಸಮಾಧಾನ ಗೊಂಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರದಂತೆ ಈ ವರ್ಗಾವಣೆ ನಡೆದಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ, ದಾಖಲಾತಿ ಹಿತದೃಷ್ಟಿ ಯಿಂದ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಮಸ್ಯೆಯನ್ನು ಗಮನಕ್ಕೆ ತರಲಾಗುತ್ತದೆ ಎಂದು ಅವರು ತಿಳಿಸಿದರು.
ಸಮಸ್ಯೆ ಬಗೆಹರಿಸದಿದ್ದರೆ ಟಿಸಿ ಕೊಡಿ!
25 ವರ್ಷಗಳ ಇತಿಹಾಸವುಳ್ಳ ಶಾಲೆ ಇದಾಗಿದ್ದು, ಕಳೆದ ಹತ್ತು ವರ್ಷಗಳಿಂದ ಈ ಶಾಲೆಗೆ ಶೇ.100 ಫಲಿತಾಂಶ ಬರುತ್ತಿದೆ. ಆದರೆ ಪೋಷಕರಲ್ಲಿ, ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಯಾಗಿ ಶಾಲೆಯ ಎಲ್ಲಾ ಅಧ್ಯಾಪಕರನ್ನು ವರ್ಗಾವಣೆ ಮಾಡಲಾಗಿದೆ.
ಹೊಸದಾಗಿ ಬಂದ ಶಿಕ್ಷಕರ ಮೇಲೆ ಯಾವ ಭಿನ್ನಾಭಿಪ್ರಾಯವಿಲ್ಲ. ಆದರೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿ ಯಿಂದ ಮೊದಲಿದ್ದ ಶಿಕ್ಷಕರ ಪೈಕಿ ಕನಿಷ್ಟ 3-4 ಶಿಕ್ಷಕರನ್ನು ಮತ್ತೆ ಇಲ್ಲಿಗೆ ನಿಯೋಜಿಸಬೇಕು. ಮೂರು ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ಟಿ.ಸಿ. ಪಡೆದು ಮಕ್ಕಳನ್ನು ಬೇರೆ ಶಾಲೆಗೆ ಕಳಿಸುತ್ತೇವೆ ಎಂದು ಪೋಷಕರು ತಿಳಿಸಿದ್ದಾರೆ.







