ಉಡುಪಿ ಜಿಲ್ಲೆಯಲ್ಲಿ ಬಿರುಸು ಕಳೆದುಕೊಂಡ ಮಳೆ; ನೆರೆ ನೀರು ನುಗ್ಗಿ ದಿನಸಿ ವಸ್ತುಗಳಿಗೆ ಹಾನಿ

ಉಡುಪಿ: ಎರಡು ದಿನಗಳ ಕಾಲ ಜಿಲ್ಲೆಯ ವಿವಿದೆಡೆಗಳಲ್ಲಿ ಧಾರಾಕಾರವಾಗಿ ಸುರಿದ ಮಳೆ ಇಂದು ಬಿಡುವು ಪಡೆದಿತ್ತು. ಆದರೆ ಮಳೆ-ಗಾಳಿಯೊಂದಿಗೆ ಮನೆಗೆ ನುಗ್ಗಿದ ನೆರೆ ನೀರಿನಿಂದ ಕುಂದಾಪುರ ಹಾಗೂ ಬೈಂದೂರುಗಳ ಹಲವೆಡೆ ದಿನಸಿ ಸಾಮಗ್ರಿಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾ ಗಿರುವ ವರದಿಗಳು ಬಂದಿವೆ.
ಬೈಂದೂರು ತಾಲೂಕಿನ ಕಂಬದಕೋಣೆಯಲ್ಲಿ ರಾಮಕೃಷ್ಣ ಗಾಣಿಗ ಎಂಬವರ ಮನೆಗೆ ನೆರೆ ನೀರು ನುಗ್ಗಿ ದಿನಸಿ ಸಾಮಗ್ರಿಗಳು ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು 24,000ದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಅದೇ ರೀತಿ ಕುಂದಾಪುರ ತಾಲೂಕು ಸೇನಾಪುರದ ಪದ್ದು ಪೂಜಾರ್ತಿ ಮನೆಗೆ ನುಗ್ಗಿದ ನೀರಿನಿಂದ ಮನೆಯಲ್ಲಿದ್ದ ಹಲವು ವಸ್ತುಗಳಿಗೆ ಹಾನಿ ಸಂಭವಿಸಿದ್ದು 10,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಸಿದ್ಧಾಪುರದ ಗೋವಿಂದ ಪೂಜಾರಿ ಅವರ ಜಾನುವಾರು ಕೊಟ್ಟಿಗೆ ಮಳೆಯಿಂದ ಹಾನಿಗೊಂಡಿದ್ದರೆ, ಬೈಂದೂರು ತಾಲೂಕು ಹಳ್ಳಿಹೊಳೆಯ ಶೀನ ಪೂಜಾರಿ ಹಾಗೂ ಉಳ್ಳೂರು ಗ್ರಾಮದ ಗಿರಿಜಮ್ಮ ಶೆಡ್ತಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಸಂಪೂರ್ಣ ಹಾನಿಗೊಂಡಿದ್ದು 60 ಸಾವಿರ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕು ಕಂದಾವರ ಗ್ರಾಮದ ಕಮಲಾ ಶೇರಿಗಾರ್ತಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು 40,000ರೂ. ಹಾಗೂ ಕಾರ್ಕಳ ತಾಲೂಕು ನೀರೆ ಗ್ರಾಮದ ರಾಘವೇಂದ್ರ ಆಚಾರ್ಯ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಗೊಂಡಿದೆ.
ಅಜ್ರಿ ಗ್ರಾಮದ ಯಡೂರು ಎಂಬಲ್ಲಿ ಜಾನ್ಸನ್ ಬಿನ್ ಜೋಸೆಫ್ ಎಂಬವರ ಮನೆಯ ಮೇಲೆ ಹಲಸಿನ ಮರ ಬಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಅದೇ ರೀತಿ ಹೆಮ್ಮಾಡಿ ಗ್ರಾಮದ ಮಾದು ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಗೆ ಹಾನಿಗೊಂಡಿದ್ದು 30 ಸಾವಿರಕ್ಕೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕೆಕ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 50.7ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 83.5 ಹಾಗೂ ಕಾರ್ಕಳದಲ್ಲಿ 77.1ಮಿ.ಮೀ. ಅತ್ಯಧಿಕ ಮಳೆಯಾಗಿದೆ. ಕಳೆದ ಐದು ದಿನಗಳ ಸತತ ರೆಡ್ ಅಲರ್ಟ್ ಬಳಿಕ ನಾಳೆಯಿಂದ ಸಾಮಾನ್ಯ ಮಳೆಯ ಯಲ್ಲೋ ಅಲರ್ಟ್‌ನ್ನು ಹವಾಮಾನ ಇಲಾಖೆ ಕರಾವಳಿಯ ಜಿಲ್ಲೆಗಳಿಗೆ ನೀಡಿದೆ.







