ಜಾಗೃತಿ ಮೂಡಿಸಿದರೂ ಸೈಬರ್ ಅಪರಾಧ ಸಂಖ್ಯೆ ಹೆಚ್ಚಳ: ಶಿವಶಂಕರ್

ಉಡುಪಿ, ಜೂ.18: ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ, ಎಚ್ಚರಿಕೆಗಳನ್ನು ಪದೇ ಪದೇ ನೀಡುತಿದ್ದರೂ, ಸೈಬರ್ ಅಪರಾಧಗಳ ಸಂಖ್ಯೆಗಳು ಕಡಿಮೆಯಾಗದೇ ಹೆಚ್ಚುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿ ಇದ್ದು ಅದು ಅಪಾಯಗಳಿಗೂ ಕಾರಣವಾಗುತ್ತಿವೆ ಎಂದು ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಎ ಶಿವಶಂಕರ್ ಹೇಳಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಹಾಗೂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯುರಿಟಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸೈಬರ್ ಕ್ರೈಮ್ ಕುರಿತು ಮಾತನಾಡಿದರು.
ಭಾರತದಲ್ಲಿ ಯುವಜನ ಸಂಪನ್ಮೂಲ ಶೇ.60ರಷ್ಟಿದ್ದು, ಇದನ್ನು ನಾಶ ಪಡಿಸುವ ಉದ್ದೇಶದಿಂದ ಮಾದಕ ವಸ್ತುಗಳ ಜಾಲವೊಂದು ಯುವ ಜನತೆಯನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿದೆ. ಈ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಲು ಕಾರಣವಾಗುತ್ತಿದೆ. ಇದು ಆತಂಕಕಾರಿ ವಿಷಯವಾಗಿದ್ದು, ಎಲ್ಲರೂ ಎಚ್ಚರವಹಿಸಬೇಕಾಗಿದೆ ಎಂದರು.
ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತೀಯರ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳಿಂದ ಯುವಜನತೆಯಲ್ಲಿ ಶೇ.2.1ರಷ್ಟು ಇರಬೇಕಿದ್ದ ಫಲವತ್ತತೆಯ ಪ್ರಮಾಣ 1.7ಕ್ಕೆ ಕುಸಿದಿದೆ. ಆದ್ದರಿಂದ ಯುವಜನತೆ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಎಂ.ಎಸ್ ಕಾಲೇಜಿನ ಉಪನ್ಯಾಸಕ ಸಂತೋಷ್ ನೀಲಾವರ ಭಾಗವಹಿಸಿ ವಿವಿಧ ರೀತಿಯ ಸೈಬರ್ ಅಪರಾಧಗಳ ಕುರಿತು ವಿವರಿಸಿದರಲ್ಲದೇ ಸೆಕ್ಯುರಿಟಿ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ್ ವಹಿಸಿದ್ದರು.ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದತ್ತಕುಮಾರ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರೇಮ್‌ಸಾಯಿ ಆರ್.ಎಂ. ಸ್ವಾಗತಿಸಿ, ಗೌತಮಿ ಜಿ. ಸುವರ್ಣ ವಂದಿಸಿದರು. ಮಹಮ್ಮದ್ ಸಹದ್ ಕಾರ್ಯಕ್ರಮ ನಿರೂಪಿಸಿದರು.







