ಉಡುಪಿ ಸರ್ವ ಜನಾಂಗದ ಶಾಂತಿಯ ತೋಟ: ಸುಂದರ ಮಾಸ್ತರ್

ಉಡುಪಿ, ಜೂ.19: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಹರಿರಾಮ್ ಶಂಕರ್ ಅವರನ್ನು ಪುಷ್ಪ ಗುಚ್ಚ ನೀಡಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್, ಉಡುಪಿ ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿನ ಕೆಲವೊಂದು ವಿಚ್ಛಿಧ್ರಕಾರಿ ಶಕ್ತಿಗಳು ಇಲ್ಲಿನ ಸೌಹಾರ್ದತೆಯನ್ನು ಕೆಡಿಸಲು ಹಲವು ಬಾರಿ ಪ್ರಯತ್ನಿಸಿದರೂ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಪ್ರಗತಿಪರ ಸಂಘಟನೆಗಳು ಅದಕ್ಕೆ ಅವಕಾಶ ಕೊಡದೇ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ, ಸಹಭಾಳ್ವೆ ಯನ್ನು ಪ್ರತಿಪಾದಿಸುತ್ತಾ ಚಳುವಳಿ ರೂಪಿಸಿಕೊಂಡು ಬಂದಿವೆ ಎಂದು ವಿವರಿಸಿದರು.
ಹೊಸದಾಗಿ ಬಂದ ತಾವೂ ಕೂಡ ಇದೇ ಪರಂಪಂರೆಯನ್ನು ಮುಂದು ವರಿಸಿಕೊಂಡು ಹೋಗುವಂತೆ ಮನವಿಮಾಡಿಕೊಳ್ಳಲಾಯಿತು. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಎಲ್ಲಾ 7 ತಾಲೂಕು ಗಳಲ್ಲೂ ತಾಲೂಕು ಶಾಖೆ ಹೊಂದಿರುವ ನಮ್ಮ ಸಂಘಟನೆ ಸದಾ ಶೋಷಿತರ ಪರ ನಿರಂತರ ಹೋರಾಟ ನಡೆಸುತ್ತಾ ಬರುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಅವರು, ಹನೆಹಳ್ಳಿ ಶೂಟೌಟ್ ಪ್ರಕರಣ, ಕೊಲ್ಲೂರು ಗಂಗೆ ಕೊರಗ ಪ್ರಕರಣ, ಹೆಬ್ರಿಯ ಪ್ರೀತಿ ವಂಚನೆಯಿಂದ ದಲಿತ ಹುಡುಗಿಯ ಆತ್ಮಹತ್ಯೆ ಪ್ರಕರಣ ಮತ್ತು ಮಾವಿನಕಟ್ಟೆ ದಲಿತ ಯುವತಿಯ ಮೇಲೆ ಹಲ್ಲೆ ಪ್ರಕರಣವನ್ನೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾದ ನಿಯೋಗದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಭಾಸ್ಕರ್ ಮಾಸ್ತರ್ ಕುಂಜಿಬೆಟ್ಟು, ರಾಜೇಂದ್ರ ಮಾಸ್ಟರ್ ಬೆಳ್ಳೆ, ಕುಮಾರ ಕೋಟಾ, ಶ್ರೀಧರ ಕುಂಜಿಬೆಟ್ಟು, ಬ್ರಹ್ಮಾವರ ತಾಲೂಕು ಸಂಚಾಲಕ ಹರಿಶ್ಚಂದ್ರ ಬಿರ್ತಿ ಇದ್ದರು.







