ವಂಡಾರಿನಲ್ಲಿ ಕಾರ್ಮಿಕನಿಗೆ ಒಂಟಿಕಾಲಿನ ಶಿಕ್ಷೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಐಟಿಯು ಆಗ್ರಹ

ಉಡುಪಿ: ಬ್ರಹ್ಮಾವರ ತಾಲೂಕು ವಂಡಾರಿನ ಕೃಷ್ಣ ಪ್ರಸಾದ್ ಕ್ಯಾಶೂ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದ ಶಿರೂರು ಗ್ರಾಮದ ಪ್ರವೀಣ್ ಎಂಬ ಯುವ ಕಾರ್ಮಿಕನಿಗೆ ಕಾರ್ಖಾನೆ ಗೇಟ್ ಬಳಿ ಅಮಾನವೀಯವಾಗಿ ಒಂಟಿ ಕಾಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿರುವ ವರದಿ ಪತ್ರಿಕೆಗಳಲ್ಲಿ ಬಂದಿದ್ದು, ಕಾರ್ಖಾನೆ ಮಾಲಕ ಸಂಪತ್ ಶೆಟ್ಟಿಯ ಈ ವರ್ತನೆ ಯನ್ನು ಸಿಐಟಿಯು ಉಗ್ರವಾಗಿ ಖಂಡಿಸಿದೆ.
ಕೆಲಸದ ಸಮಸ್ಯೆಗಳು ಏನೇ ಇದ್ದರೂ ತನ್ನದೇ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನ ಜೊತೆ ಮಾತುಕತೆ ಮಾಡಿ ಮುಂದೆ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ಕೊಟ್ಟು ಬಗೆಹರಿಸಬಹು ದಾಗಿತ್ತು. ಆದರೆ ಕಾರ್ಮಿಕನೆಂದರೆ ಗುಲಾಮರು ಎಂಬ ಕೆಟ್ಟ ಮನೋಭಾವ ಹೊಂದಿದ ಇಂತಹ ಮಾಲಕರು ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ. ಈ ಮೂಲಕ ಕಾರ್ಮಿಕನ ಜೀವಕ್ಕೆ ಸಂಚಕಾರ ವನ್ನೂ ತಂದಿದ್ದಾರೆ ಎಂದು ಸಿಐಟಿಯು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.
ಈ ಪ್ರಕರಣವನ್ನು ಉಡುಪಿ ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿ ಕೊಂಡು ತನಿಖೆಗೊಳಪಡಿಸಿ ಮಾಲಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಪ್ರವೀಣ್ ಎಂಬ ಕಾರ್ಮಿ ಕನ ಪರಿಸ್ಥಿತಿಯೇ ಹೀಗಿದ್ದರೆ ಇನ್ನೂ ಕೃಷ್ಣಪ್ರಸಾದ್ ಕಾರ್ಖಾನೆ ಒಳಗೆ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿ ಕಾನೂನು ಬದ್ಧ ಯಾವುದೇ ಸೌಲಭ್ಯ ನೀಡದೇ ಮತ್ತಷ್ಟು ಕಠೋರವಾಗಿ ಜೀತದಾಳುಗಳಾಗಿ ದುಡಿಸುತ್ತಿರಬಹುದು ಎಂದು ಸಿಐಟಿಯು ಸಂಶಯ ವ್ಯಕ್ತಪಡಿಸಿದೆ.
ಇದೊಂದು ಪಾಳೆಗಾರಿಕಾ ಮನಸ್ಥಿತಿಯಾಗಿದ್ದು, ದುರ್ಬಲರ ಮೇಲೆ ಹಣವುಳ್ಳವರು ಮಾಡುವ ದೌರ್ಜನ್ಯ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ವಿಶೇಷ ಗಮನ ನೀಡಬೇಕು ಎಂದು ಸಿಐಟಿಯು ಹೇಳಿಕೆಯಲ್ಲಿ ಆಗ್ರಹಿಸಿದೆ.
ಸದ್ಯ ಕಾರ್ಮಿಕರ ಪರವಾದ ಕಾನೂನುಗಳಿದ್ದಾಗ್ಯೂ ಕೂಡ ಕಾನೂನಿನ ಭಯವಿಲ್ಲದೆ ಮಾಲಕರು ಅಧಿಕಾರ ಮತ್ತು ಹಣ ಬಲದಿಂದ ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ. ಇನ್ನು ಕೇಂದ್ರ ಸರಕಾರ ತರುತ್ತಿರುವ ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ ಮಾಲಕರು, ಕಾರ್ಮಿಕರನ್ನು ಇನ್ನಷ್ಟು ಶೋಷಿಸಲು ಸಹಾಯಕವಾಗುತ್ತದೆ. ಆದ್ದರಿಂದ ಎಲ್ಲಾ ವಲಯ ಗಳಿಂದಲೂ ಕಾರ್ಮಿಕರು ಸಂಘಟಿತರಾಗ ಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿಕೆಯಲ್ಲಿ ತಿಳಿಸಿದ್ದಾರೆ.







