ಶಾಲಾ ಮಕ್ಕಳ ಸುರಕ್ಷತೆಗಾಗಿ ಉಡುಪಿ ಜಿಲ್ಲೆಯಾದ್ಯಂತ ಪೊಲೀಸರಿಂದ ಅಭಿಯಾನ
282 ವಾಹನಗಳ ವಿರುದ್ಧ ಕೇಸ್; 1.60 ಲಕ್ಷ ರೂ. ದಂಡ

ಉಡುಪಿ: 2025-26ನೇ ಸಾಲಿನ ಶೈಕ್ಷಣಿಕ ಋತು ಪ್ರಾರಂಭ ಗೊಳ್ಳುತಿದ್ದಂತೆ ಜಿಲ್ಲೆಯ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಉಡುಪಿ ಜಿಲ್ಲಾ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ಶಾಲಾ ವಾಹನಗಳ ತಪಾಸಣೆಯ ವಿಶೇಷ ಅಭಿಯಾನ ವನ್ನು ಇಂದು ಪ್ರಾರಂಭಿಸಿದ್ದಾರೆ.
ಶಾಲಾ ಮಕ್ಕಳನ್ನು ಹೊತ್ತೊಯ್ಯುವ ವಾಹನಗಳಲ್ಲಿ ಓವರ್ ಲೋಡಿಂಗ್, ಅಧಿಕೃತವಾದ ಸೂಕ್ತ ದಾಖಲೆಗಳ ಪರಿಶೀಲನೆ, ಕುಡಿದು ವಾಹನಗಳ ಚಾಲನೆಯ ಕುರಿತಂತೆ ಜಿಲ್ಲೆಯ ಎಲ್ಲಾ ಮೂರು ಪೊಲೀಸ್ ಉಪ ವಿಭಾಗಗಳಲ್ಲೂ ಇಂದು ಪೊಲೀಸರು ಪರಿಶೀಲನೆ ನಡೆಸಿದರು.
ಮೊದಲ ದಿನದ ಪರಿಶೀಲನೆ ವೇಳೆ ಮೂರು ಉಪವಿಭಾಗಗಳಲ್ಲಿ (ಕುಂದಾಪುರ, ಕಾರ್ಕಳ, ಉಡುಪಿ) ಒಟ್ಟು 930 ವಿವಿಧ ಶಾಲಾ ವಾಹನಗಳನ್ನು ತಪಾಸಣೆಗೊಳಪಡಿಸಲಾಯಿತು. ಈ ವೇಳೆ 282 ವಾಹನ ಗಳು ವಿವಿಧ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡುಬಂದವು. ಇವುಗಳ ಮೇಲೆ ಒಟ್ಟು 1.60 ಲಕ್ಷ ರೂ.ದಂಡ ವಿಧಿಸಿದ್ದು 20ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು ಬಳಿಕ ಎಚ್ಚರಿಕೆ ನೀಡಿ ಯಾವುದೇ ಮೊಕದ್ದಮೆ ದಾಖಲಿಸದೇ ಬಿಡುಗಡೆ ಮಾಡಲಾಯಿತು.
ಶಾಲಾ ವಾಹನಗಳ ತಪಾಸಣಾ ಅಭಿಯಾನವನ್ನು ಇಂದು ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಲ್ಲೂ ನಡೆಸಲಾಯಿತು. ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಲೆಗಳ ಮುಂಭಾಗದಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಶಾಲಾ ವಾಹನಗಳ ಮೇಲೆ ನಿಗಾ ಇಟ್ಟು, ಪರಿಶೀಲನೆ ನಡೆಸಿದರು.
ಆಟೋ, ಓಮ್ನಿ, ಕಾರು, ಕ್ಯಾಬ್, ಬಸ್ ಮುಂತಾದ ವಾಹನಗಳಲ್ಲಿ, ತಮ್ಮ ಮಕ್ಕಳನ್ನು ಕರೆತಂದ ಪೋಷಕರ ವಾಹನಗಳನ್ನು ಸಹ ಪೊಲೀಸರು ತಪಾಸಣೆ ಗೊಳಪಡಿಸಿದರು. ಈ ವೇಳೆ ಓರ್ವ ಪೋಷಕರು ಕುಡಿದು ವಾಹನ ಚಾಲನೆ ಮಾಡಿಕೊಂಡು ಬಂದಿರುವುದು ಪತ್ತೆಯಾಗಿದೆ ಎಂದು ಎಸ್ಪಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಕುಂದಾಪುರ ಉಪವಲಯದಲ್ಲಿ 300 ವಾಹನಗಳ ತಪಾಸಣೆ ನಡೆಸಿದ್ದು 82 ವಾಹನಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. 36,300 ರೂ. ದಂಡವನ್ನು ವಿಧಿಸಲಾಗಿದೆ. 24 ವಾಹನಗಳಲ್ಲಿ ಸೂಕ್ತ ದಾಖಲೆಗಳಿಲ್ಲದ್ದು ಪತ್ತೆಯಾದರೆ, 27ರಲ್ಲಿ ಓವರ್ ಲೋಡಿಂಗ್ ಕಂಡುಬಂದಿದೆ. 31 ವಾಹನಗಳು ವೇಗದ ಮಿತಿಯನ್ನು ದಾಟಿರುವುದು ಪತ್ತೆಯಾಗಿದೆ.
ಕಾರ್ಕಳ ವಲಯದಲ್ಲಿ 217 ವಾಹನ ತಪಾಸಣೆಗೊಳಗಾಗಿದ್ದು, 71ರಲ್ಲಿ ನಿಯಮ ಉಲ್ಲಂಘನೆ ಪತ್ತೆಯಾ ಗಿದೆ. 42,000ರೂ. ದಂಡ ವಸೂಲಿ ಮಾಡಲಾಗಿದೆ. ಮೂರು ವಾಹನಗಳಲ್ಲಿ ಸೂಕ್ತ ದಾಖಲೆ ಇರದಿದ್ದರೆ, 5ರಲ್ಲಿ ಓವರ್ ಲೋಡಿಂಗ್ ಪತ್ತೆಯಾಯಿತು. 63 ವಾಹನಗಳು ಮಿತಿಗಿಂತ ವೇಗವಾಗಿ ಓಡಿರುವುದು ಕಂಡುಬಂದಿದೆ.
ಉಡುಪಿ ವಿಭಾಗದಲ್ಲಿ 413 ವಾಹನಗಳ ತಪಾಸಣೆ ನಡೆಸಿದ್ದು, 129 ರಲ್ಲಿ ನಿಯಮ ಉಲ್ಲಂಘನೆಯಾಗಿ ರುವುದು ಕಂಡುಬಂದಿದೆ. ಇವುಗಳಿಂದ 80,500ರೂ. ದಂಡ ವಸೂಲಿ ಮಾಡಲಾಗಿದೆ. ಕುಡಿದು ವಾಹನ ಚಲಾಯಿಸಿದ ಒಂದು ಪ್ರಕರಣ ಪತ್ತೆಯಾದರೆ, ಸೂಕ್ತ ದಾಖಲೆಗಳಿಲ್ಲ 12, ಓವರ್ ಲೋಡ್‌ನ 16 ಹಾಗೂ ವೇಗದ ಮಿತಿ ದಾಟಿದ 100 ಪ್ರಕರಣಗಳು ಪತ್ತೆಯಾಗಿವೆ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ 930 ವಾಹನಗಳು ತಪಾಸಣೆಗೊಳಗಾಗಿದ್ದು, 282 ನಿಯಮ ಉಲ್ಲಂಘನೆಯ ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ 1,58,800ರೂ. ದಂಡ ವಿಧಿಸಲಾಗಿದ್ದು, 1 ಕುಡಿದ ಚಾಲನೆ, 39 ಸೂಕ್ತ ದಾಖಲೆ ಇಲ್ಲದಿರುವುದು, 48 ಓವರ್ ಲೋಡಿಂಗ್ ಹಾಗೂ 194 ವೇಗದ ಮಿತಿ ದಾಟಿದ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೈಕ್ಷಣಿಕ ಋತುವಿನ ಪ್ರಾರಂಭದಲ್ಲೇ ಶಾಲಾ ವಾಹನಗಳ ಮಿತಿ ಮೀರಿದ ವೇಗ, ಸುರಕ್ಷತೆಯ ಕೊರತೆ, ಶಾಲಾ ವಾಹನಗಳ ಚಾಲಕರ ನಿರ್ಲಕ್ಷದ ಚಾಲನೆಯ ಕೆಲವು ಪ್ರಕರಣಗಳು ವರದಿಯಾದ ಬಳಿಕ ಶಾಲಾ ಮಕ್ಕಳ ಹಿತರಕ್ಷಣೆಯ ಉದ್ದೇಶದಿಂದ, ಪೋಷಕರಲ್ಲಿ ಹಾಗೂ ಶಾಲಾ ಆಡಳಿತ ಮಂಡಳಿಯಲ್ಲಿ ಜಾಗೃತಿ ಮೂಡಿಸಲು, ಶಾಲಾ ವಾಹನಗಳ ಚಾಲಕರಿಗೆ ನಿಯಮಗಳ ಪಾಲನೆಗೆ ಎಚ್ಚರಿಸಲು ಇಂಥ ಒಂದು ಅಭಿಯಾನವನ್ನು ಜಿಲ್ಲೆಯಾದ್ಯಂತ ಇಂದು ಪೊಲೀಸ್ ಇಲಾಖೆ ಕೈಗೊಂಡಿದೆ.
ಸದ್ಯ ಯಾರ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ. ಎಚ್ಚರಿಕೆ ನೀಡಿ ಬಿಟ್ಟು ಬಿಡಲಾಗಿದೆ. ಇಂಥ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲೂ ಮಾಡುತ್ತೇವೆ. ವಾರದ ಬಳಿಕ ಇಂಥ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.







