ಪಿಪಿಪಿ ಮಾದರಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ತ್ರೈಮಾಸಿಕ ಕೆಡಿಪಿ ಸಭೆ

ಉಡುಪಿ: ಜಿಲ್ಲೆಯಲ್ಲಿ ವಿಪುಲ ಅವಕಾಶವಿರುವ ಪ್ರವಾಸೋದ್ಯಮ ಹಾಗೂ ಕ್ರೀಡಾಭಿವೃದ್ಧಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಉಡುಪಿ ಜಿಲ್ಲೆ ರಾಜ್ಯದ ಹಾಗೂ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕು. ಇದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಪ್ರವಾಸೋದ್ಯಮ ಹಾಗೂ ಕ್ರೀಡೆಯ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ (ಕೆಡಿಪಿ) ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ಪ್ರಾಕೃತಿಕವಾಗಿ ಹಾಗೂ ನೈಸರ್ಗಿಕವಾಗಿ ಹಲವು ಸುಂದರ ತಾಣಗಳನ್ನು ಹೊಂದಿದ್ದು, ಅನೇಕ ಧಾರ್ಮಿಕ ಕೇಂದ್ರಗಳೂ ಇಲ್ಲಿವೆ. ಇವುಗಳ ಮೂಲಕ ಹೆಚ್ಚೆಚ್ಚು ಪ್ರವಾಸಿಗರು ಜಿಲ್ಲೆಗೆ ಬರುವಂತೆ ಆಕರ್ಷಿ ಸಲು ಕ್ರಮಕೈಗೊಳ್ಳಬೇಕು. ಅನಧಿಕೃತ ಹೋಮ್‌ಸ್ಟೇಗಳಿಗೆ ಕಡಿವಾಣ ಹಾಕಬೇಕು. ಪ್ರವಾಸಿ ತಾಣಗಳಲ್ಲಿ 18 ವರ್ಷದೊಳಗಿನ ಮಕ್ಕಳು ಕೆಲಸ ನಿರ್ವಹಿಸದಂತೆ ನೋಡಿಕೊಳ್ಳಬೇಕು. ಪಿಪಿಪಿ ಮಾದರಿಯಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡೆ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವಂತೆ ಅವರು ಸೂಚಿಸಿದರು.
ಕಡಲು ಕೊರೆತ: ಕಡಲ ಕೊರೆತ ತಡೆಗಟ್ಟುವ ಸಲುವಾಗಿ 4.50 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಕಾಪು ತಾಲೂಕಿನ ಹೆಜಮಾಡಿಯಿಂದ ಬೈಂದೂರಿನ ಶಿರೂರಿ ನವರೆಗೆ ಕಡಲ ಕೊರೆತ ಸ್ಥಳಗಳನ್ನು ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಬಂದರು ಇಲಾಖೆಯ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ನಿರ್ದೇಶನ ನೀಡಿದರು.
ಮಲ್ಪೆ ಬಂದರು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಕೂಡಲೇ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಬಂದರು ಪ್ರದೇಶದೊಳಗೆ ಸಿಸಿಟಿವಿಯನ್ನು ಅಳವಡಿಸಿ, ಭದ್ರತೆಯ ಜೊತೆಗೆ ಸ್ವಚ್ಛತೆಯನ್ನು ಕಾಪಾಡಲು ಆದ್ಯತೆ ನೀಡಬೇಕು ಎಂದೂ ಅವರು ಬಂದರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರುಪೂರ್ವ ಹಾಗೂ ಮುಂಗಾರು ಮಳೆ ಯಥೇಚ್ಛವಾಗಿ ಬಂದಿದೆ. ಅಲ್ಪಪ್ರಮಾಣದ ಪ್ರವಾಹವೂ ಉಂಟಾಗಿದೆ. ಮುಂದೆ ಮುಂಗಾರು ಮಳೆ ಅಧಿಕ ಪ್ರಮಾಣದಲ್ಲಿ ಬರುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರವಾಹ ಸಂದರ್ಭದಲ್ಲಿ ಹೆಚ್ಚಿನ ಮಾನವ ಹಾಗೂ ಜಾನುವಾರುಗಳ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿಯಾಗದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೈಗೊಳ್ಳಬೇಕು ಎಂದರು.
ವಾರಾಹಿ ಯೋಜನೆಗೆ ಪರಿಹಾರ: ವಾರಾಹಿ ನೀರಾವರಿ ಯೋಜನೆಯ ಕಾಮಗಾರಿ ಗಳನ್ನು ಕೈಗೊಳ್ಳಲು ಐದು ವರ್ಷಗಳ ಹಿಂದೆ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅವರ ಸ್ವತ್ತು ಗಳನ್ನು ಸಹ ಸ್ವಾಧೀನಪಡಿಸಿ ಕೊಳ್ಳಲಾಗಿತ್ತು. ಆದರೆ ಅವರಿಗೆ ಈವರೆಗೆ ಭೂಪರಿಹಾರ ಹಣವನ್ನು ನೀಡಿಲ್ಲ. ಇದರಿಂದ ರೈತರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಮುಂದಿನ ಸಭೆಯ ಒಳಗೆ ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದ ಸಚಿವೆ, ಈ ಕಾಮಗಾರಿಗೆ ಅಗತ್ಯವಿರುವ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಇವೆ. ಇವುಗಳ ಕ್ಲಿಯರೆನ್ಸ್‌ಅನ್ನು ಅರಣ್ಯ ಇಲಾಖೆ ಕೂಡಲೇ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದ ಅವರು, ಕಳೆದ ಸಾಲಿನಲ್ಲಿ ಕಳಪೆ ನೆಲಗಡಲೆ ಬೀಜವನ್ನು ರೈತರಿಗೆ ವಿತರಿಸಿರುವ ಬಗ್ಗೆ ದೂರುಗಳಿವೆ. ವಿತರಣೆಯಾದ ಬೀಜ ಕಳಪೆ ಯಾಗಿದ್ದಲ್ಲಿ ಸರಬರಾಜು ಮಾಡಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ಸಾರ್ವಜನಿಕರು ಗೃಹ ನಿರ್ಮಾಣ ಕೈಗೊಳ್ಳಲು ಅಗತ್ಯವಿರುವ ಮರಳು, ಕಲ್ಲು, ಕೆಂಪುಇಟ್ಟಿಗೆ ಸೂಕ್ತ ಬೆಲೆಗೆ ಸಿಗುವಂತೆ ಕ್ರಮವಹಿಸಬೇಕು ಎಂದ ಅವರು, ಅನಧಿಕೃತವಾಗಿ ಮರಳು ಗಣಿಗಾರಿಕೆ, ಸಾಗಾಣಿಕೆ, ಮಾರಾಟಕ್ಕೆ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕು. ಕೆಂಪುಕಲ್ಲಿ ಗಣಿಗಾರಿಕೆಗೆ ಗಣಿ ಇಲಾಖೆಯಿಂದ ಪರವಾನಿಗೆ ಲಭಿಸಿದ್ದರೂ ಅರಣ್ಯ ಇಲಾಖೆಯವರ ಹಸ್ತಕ್ಷೇಪದಿಂದ ಕೈಗೊಳ್ಳಲು ಆಗುತ್ತಿಲ್ಲ. ಇವನ್ನು ನಿಯಮಾನುಸಾರ ಮಾಡಲು ಅನುಮತಿ ನೀಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ, ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿ ಈ ಬಗ್ಗೆ ಸರಕಾರ ತಕ್ಷಣವೇ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ವಿಧಾನ ಪರಿಷತ್‌ನ ಸದಸ್ಯರಾದ ಮಂಜುನಾಥ್ ಭಂಡಾರಿ, ಡಾ.ಧನಂಜಯ ಸರ್ಜಿ ಹಾಗೂ ಕಿಶೋರ್ ಕುಮಾರ್ ಪುತ್ತೂರು ಅಲ್ಲದೇ ಶಾಸಕರಾದ ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ ಶಂಕರ್, ಡಿಎಫ್‌ಓ ಗಣಪತಿ, ವೈಲ್ಡ್‌ಲೈಫ್ ಡಿಎಫ್‌ಓ ಶಿವರಾಮ ಎಂ.ಬಾಬು ಹಾಗೂ ಇತರರು ಉಪಸ್ಥಿತರಿದ್ದರು.







