ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ: ಸೂಲಿಬೆಲೆ

ಕುಂದಾಪುರ, ಜೂ.20: ನನ್ನನು ಗಡಿಪಾರು ಮಾಡಲು ಆಗಲ್ಲ. ನನ್ನ ವಿರುದ್ಧ ರೌಡಿಶೀಟರ್, ಗಡಿಪಾರು, ಗೂಂಡಾ ಆಕ್ಟ್ ತರಲು ಆಗಲ್ಲ. ನಾನು ಕದ್ದು ಮುಚ್ಚಿ ಓಡಾಡುವ ವ್ಯಕ್ತಿಯಲ್ಲ, ಸಮಾಜದ ನಡುವೆ ಓಡಾಡುತ್ತೇನೆ. ಇವರಿಗೆ ನನ್ನ ಓಡಾಟವನ್ನು ತಡೆಯಬಹುದು ಅಷ್ಟೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಕುಂದಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಕೋಮುವಾದಿ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರತಿ ಬಾರಿಯೂ ಕೋಮುವಾದ ಬಗ್ಗೆ ಮಾತನಾಡಬೇಡಿ ಎಂದು ಸಹಜವಾಗಿ ಹೇಳುತ್ತಾರೆ. ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ. ಮುಸ್ಮಿಮರಿಗೆ ಜ್ಞಾನ ಸಿಗುವ ವಿಚಾರ ಹೇಳುತ್ತೇನೆ. ಎಲ್ಲೂ ಕೂಡ ಹಿಂದೂ ಮುಸಲ್ಮಾನ ಗಲಾಟೆ ಆಗಿಲ್ಲ. ಈ ಬಾರಿ ಕುಂದಾಪುರದ ಪೊಲೀಸರು ಹೊಸ ವಿಷಯ ಸೇರಿಸಿದ್ದಾರೆ. ವಿಷಯ ಬಿಟ್ಟು ಬೇರೆ ಮಾತನಾಡಬೇಡಿ ಎಂದಿದ್ದಾರೆ ಎಂದರು.
ಅಖಂಡ ಭಾರತದ ಕುರಿತು ನಾನು ಮಾತನಾಡುತ್ತಿದ್ದೇನೆ. ಯಾವುದೇ ರಾಜಕೀಯ ವಿಚಾರ ಮಾತನಾಡ ಬೇಡಿ ಎಂದಿದ್ದಾರೆ. ಅವರಿಗೆ ನನ್ನ ಬಗ್ಗೆ ಹೆದರಿಕೆ ಇದೆ. ಈ ಹಿಂದೆ ಕುಂದಾಪುರಕ್ಕೆ ಬಂದಾಗಲೂ ಅಡ್ಡಿಪಡಿಸಿದ್ದರು. ಈ ಬಾರಿ ಎನ್‌ಎಸ್‌ಯುಐ ಮೂಲಕ ಒತ್ತಾಯ ಹಾಕಿದ್ದಾರೆ. ನನಗೆ ವಾಕ್ ಸ್ವಾತಂತ್ರ್ಯ ಕೊಟ್ಟಿರುವುದು ಸಿದ್ದರಾಮಯ್ಯ ಅಲ್ಲ. ನನಗೆ ಅಂಬೇಡ್ಕರ್ ನೀಡಿದ ಸಂವಿಧಾನ ಅವಕಾಶ ನೀಡಿದೆ. ಮಂಗಳೂರಿನಲ್ಲಿ ನಮ್ಮ ಹಿಂದುಗಳು ಎಲ್ಲ ಮತ ಪಂತದವರನ್ನು ಮದುವೆಯಾಗಲಿ ಎಂದಿದ್ದಕ್ಕೆ ಎಫ್‌ಐಆರ್ ಹಾಕಿದ್ದರು. ಸ್ಥಳೀಯ ಆಯೋಜಕರಿಗೆ ಒತ್ತಡ ಹೇರಲು ಹೀಗೆ ಮಾಡುತ್ತಾರೆ ಎಂದು ಅವರು ತಿಳಿಸಿದರು.







