ವಿವಿಧ ಭಾಷೆಗಳ ಸಾಹಿತ್ಯದ ವಿನಿಮಯದಿಂದ ಸಾಹಿತ್ಯ ಬೆಳವಣಿಗೆ: ಲೇಖಕಿ ವೈದೇಹಿ

ಮಣಿಪಾಲ: ಬೇರೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯಗಳ ವಿನಿಮಯ ನಡೆಯುವುದರಿಂದ ಮಾತ್ರ ಯಾವುದೇ ಸಾಹಿತ್ಯ ಬೆಳವಣಿಗೆ ಸಾಧಿಸಲು ಸಾಧ್ಯ. ಎರಡು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ ಭಾಷಾಂತರಕಾರರಿಲ್ಲದೆ ಆ ರೀತಿಯ ವಿನಿಮಯ ಸಾಧ್ಯವಿಲ್ಲ’ ಎಂದು ಕನ್ನಡದ ಹಿರಿಯ ಲೇಖಕಿ ವೈದೇಹಿ ಹೇಳಿದ್ದಾರೆ.
ಮಣಿಪಾಲದ ಅನಂತನಗರದಲ್ಲಿರುವ ಅವರ ಮನೆ ‘ಇರುವಂತಿಗೆ’ಯಲ್ಲಿ ನಡೆದ ಪುಸ್ತಕ ಬಿಡುಗಡೆಯ ಸರಳ ಸಮಾರಂಭದಲ್ಲಿ ಭಾಷಾಂತರಕಾರ್ತಿ ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಮಾಹೆ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ವರದೇಶ್ ಹಿರೇಗಂಗೆ, ಕೃತಿಕಾರರಾದ ಪಾರ್ವತಿ ಐತಾಳ್ ಮತ್ತು ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸ್ರೂರು ಶಾರದಾ ಕಾಲೇಜಿನ ಕನ್ನಡ ಉಪನ್ಯಾಸಕ ಕುಮಾರ್ ಸ್ವಾಗತಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕಿ ಕೌಸ್ತುಭ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story





