ದಲಿತ ಯುವಕನ ಸಾವಿನಲ್ಲೂ ಅಸ್ಪಶ್ಯತೆ ತೋರಿರುವುದು ಸಂವಿಧಾನ ಬಾಹಿರ ಅಲ್ಲವೇ?: ಸುನೀಲ್ಗೆ ಶ್ಯಾಮರಾಜ್ ಬಿರ್ತಿ ಪ್ರಶ್ನೆ

ಶ್ಯಾಮರಾಜ್ ಬಿರ್ತಿ
ಉಡುಪಿ, ಜೂ.21: ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಶೇ.15 ಮೀಸಲಾತಿ ಕಲ್ಪಿಸಿರುವುದನ್ನು ಸಂವಿಧಾನ ಬಾಹಿರ ಎಂದು ಟೀಕಿಸಿರುವ ಶಾಸಕ ಸುನೀಲ್ ಕುಮಾರ್ಗೆ ಬಜ್ಪೆಯ ಮರವೂರಿನಲ್ಲಿ ಬಡ ದಲಿತ ಯುವಕ ಕೀರ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದಾಗ ಮಾತನಾಡದೆ ಇರುವುದು ಮತ್ತು ಇದನ್ನು ದೊಡ್ಡ ವಿಷಯ ಮಾಡದೇ ಸುಮ್ಮನೆ ಇದ್ದು ಕೊಲೆಯಲ್ಲೂ ಅಸ್ಪೃಶ್ಯತೆ ಮಾಡಿರುವುದು ಸಂವಿಧಾನ ಬಾಹಿರ ಎಂದು ಅನಿಸಲಿಲ್ಲವೇ? ಎಂದು ದಸಂಸ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.
ಶತಶತಮಾನಗಳಿಂದ ಈ ದೇಶದ ಸರ್ವ ಸವಲತ್ತುಗಳನ್ನು ಅನುಭವಿಸಿದ, ಶೇ.60ಕ್ಕೂ ಮಿಕ್ಕಿ ದೇಶದ ಪ್ರಮುಖ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರ ಹುದ್ದೆಗಳನ್ನು ಅಲಂಕರಿಸಿರುವ, ದೇಶದ ಜನಸಂಖ್ಯೆಯ ಕೇವಲ ಶೇ.3 ಇರುವ ಮೇಲ್ವರ್ಗದ ಬ್ರಾಹ್ಮಣರಿಗೆ ಶೇ.10 ಮೀಸಲಾತಿ ಕೊಟ್ಟಿರುವುದು ಸುನೀಲ್ ಕುಮಾರಿಗೆ ಸಂವಿಧಾನ ಬಾಹಿರ ಅನಿಸಲಿಲ್ಲವೇ?
ಕಾರ್ಕಳ ಪರುಶರಾಮ ಥೀಂ ಪಾರ್ಕ್ನಲ್ಲಿ ತಮ್ಮ ಉಸ್ತುವಾರಿಯಲ್ಲೇ ಉದ್ಘಾಟನೆಗೊಂಡ ಕಂಚಿನ ಮೂರ್ತಿ, ಕೊನೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಲೇಪಿತ ಮೂರ್ತಿ ಎಂದು ಸಾಬೀತಾಗಿ ಈಗ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಅಲ್ಲವೇ, ಇದು ಕಾನೂನು ಬಾಹಿರ ಅಥವಾ ಸಂವಿಧಾನ ಬಾಹಿರ ಅಗಲಿಲ್ಲವೇ? ಎಂದು ಅವರು ಪ್ರಕಟಣೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.







