ಉಡುಪಿ: ಮಹಿಳೆಯರಿಗೆ ಸಾಲ ನೀಡಲು ಸತಾಯಿಸುತ್ತಿರುವ ರಾ. ಬ್ಯಾಂಕುಗಳು
► ಮ್ಯಾನೇಜರ್‌ಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ ಸಿಇಓ ► ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಸಭೆ

ಉಡುಪಿ, ಜೂ.21: ಸರಕಾರದ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸುವ ಹಾಗೂ ಸ್ವಉದ್ಯೋಗ ಪ್ರಾರಂಭಿಸಲಿಚ್ಛಿಸುವ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರುಗಳು ಬರುತಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದೊಂದು ಗಂಭೀರ ವಿಷಯವಾಗಿದ್ದು, ಇದು ಪುನರಾರ್ವತನೆಯಾದರೆ ಅಂಥವರ ವಿರುದ್ಧ ಸೂಕ್ತಕ್ರಮಕ್ಕೆ ಬರೆಯಲಾಗುವುದು ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕಟುವಾದ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಅಗ್ರಣಿ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ನೇತೃತ್ವದಲ್ಲಿ ಇಂದು ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಇಂದು ಹಳ್ಳಿಪ್ರದೇಶಗಳೂ ಸೇರಿದಂತೆ ಮಹಿಳೆಯರು ಆತ್ಮವಿಶ್ವಾಸದಿಂದ ಸ್ವ-ಉದ್ಯೋಗ ಕೈಗೊಳ್ಳಲು ಮುಂದೆ ಬರುತಿದ್ದಾರೆ. ಆದರೆ ನಮ್ಮ ಬ್ಯಾಂಕ್ ಮ್ಯಾನೇಜರ್‌ಗಳು ಅವರಿಗೆ ಉತ್ತೇಜನ ನೀಡುವುದನ್ನು ಬಿಟ್ಟು ಅವರ ನೈತಿಕತೆ ಕುಸಿಯುವಂಥ ವರ್ತನೆ ತೋರುತಿದ್ದಾರೆ. ಜಿಲ್ಲೆಯಲ್ಲಿ ಎಸ್‌ಬಿಐ ಶಾಖೆಯೊಂದರ ಅಧಿಕಾರಿ ಅರ್ಹತೆ ಇದ್ದರೂ ಸಾಲ ನೀಡಲು ನಿರಾಕರಿಸಿ, ಆರು ತಿಂಗಳ ಕಾಲ ಸತಾಯಿಸಿದ್ದಲ್ಲದೇ, ಸಾಲಕ್ಕೆ ಸ್ಟಾಂಪ್‌ಡ್ಯೂಟಿ ಪಡೆದ ಬಗ್ಗೆ ತಮಗೆ ದೂರು ಬಂದಿದೆ. ಆ ಮಹಿಳೆ ಅಗರಬತ್ತಿ ಉದ್ಯಮ ಮಾಡಲು ಸಾಲಕ್ಕಾಗಿ ಬಂದಿದ್ದರು ಎಂದರು.
ಕೃಷಿ ಸಾಲಕ್ಕೆ, ಸ್ವಸಹಾಯ ಸಂಘದ ಮಹಿಳೆಯರಿಗೆ ಹಾಗೂ ಶಿಕ್ಷಣ ಸಾಲಕ್ಕೆ ಸ್ಟಾಂಪ್‌ಡ್ಯುಟಿಯಿಂದ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕಿನ ಸ್ಪಷ್ಟ ಮಾರ್ಗಸೂಚಿಗಳಿವೆ. ಆದರೂ ಸಾಲ ನೀಡಲು ಮನಸ್ಸಿಲ್ಲದ ಅಧಿಕಾರಿಗಳು ಇಂಥ ಕಾನೂನು ವಿರೋಧಿ ಕ್ರಮಕ್ಕೆ ಮುಂದಾಗುತಿದ್ದಾರೆ. ಇದನ್ನು ಇಂದೇ ಕೊನೆಗೊಳಿಸಬೇಕು. ಇನ್ನೊಮ್ಮೆ ಇಂಥ ಯಾವುದೇ ದೂರು ಬಂದರೂ ನಾವು ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕಟುವಾಗಿ ನುಡಿದರು.
ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇರುವುದು ಸೇವೆಗೆ. ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಾಗೂ ಹಳ್ಳಿಗಾಡಿನಿಂದ ಬರುವ ಮಹಿಳೆಯರನ್ನು ಗೌರವಪೂರ್ಣವಾಗಿ ನೋಡಿ ಕೊಳ್ಳಬೇಕು. ಅವರಿಗೆ ಸ್ಥಳೀಯವಾದ ಕನ್ನಡ ಅಥವಾ ತುಳು ಭಾಷೆ ಗೊತ್ತಿರುವವರ ಮೂಲಕ ಎಲ್ಲಾ ರೀತಿಯ ಸಹಾಯ ಮಾಡಬೇಕು. ಸಾಧ್ಯವಿದ್ದಷ್ಟು ಬೇಗ ಅವರ ಅರ್ಜಿ ವಿಲೇವಾರಿ ಮಾಡಬೇಕು. ಇನ್ನು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಖಂಡಿತ ನೀವು ಅನುಭವಿಸಬೇಕಾಗುತ್ತದೆ ಎಂದು ಪ್ರತೀಕ್ ಬಾಯಲ್ ಹೇಳಿದರು.
ಜಿಲ್ಲೆಯ ಬ್ಯಾಂಕ್ ಗಳ ವೈಫಲ್ಯ : ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಸಾಲ ನೀಡಿಕೆಯಲ್ಲಿ ಶೇ.100 ಸಾಧನೆ ಮಾಡಲು ವಿಫಲವಾಗಿರುವ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಿಇಓ, ಇದರರ್ಥ ನೀವು ವ್ಯವಹಾರದಲ್ಲಿ ವಿಫಲರಾಗಿದ್ದೀರೆಂದು ಆಗುತ್ತದೆ. 2024-25ನೇ ಸಾಲಿನಲ್ಲಿ ಆದ್ಯತಾ ರಂಗಕ್ಕೆ ಒಟ್ಟಾರೆಯಾಗಿ 8,793.90 ಕೋಟಿ ರೂ.ಸಾಲದ ಗುರಿ ಇದ್ದು, 7,697.04 ಕೋಟಿ ರೂ. ಸಾಲ ನೀಡುವ ಮೂಲಕ ಶೇ.87.53 ಸಾಧನೆ ಮಾಡಲಾಗಿದೆ. ಇದು ಸಾಧನೆಯಲ್ಲ, ಬ್ಯಾಂಕುಗಳ ವೈಫಲ್ಯ. ಶೇ.100ಕ್ಕಿಂತ ಜಾಸ್ತಿಯಾದಾಗ ಮಾತ್ರ ಸಾಧನೆ ಎನಿಸಿಕೊಳ್ಳುತ್ತದೆ ಎಂದು ಬಾಯಲ್ ಕಟುವಾಗಿ ನುಡಿದರು.
ಕೃಷಿ ಕ್ಷೇತ್ರಕ್ಕೆ ನೀಡಿದ ಗುರಿಯಲ್ಲಿ ಶೇ.86.28, ಎಂಎಸ್‌ಎಂಇಯಲ್ಲಿ ಶೇ.91, ಶಿಕ್ಷಣ ಸಾಲ ನೀಡಿಕೆಯಲ್ಲಿ ಶೇ.95.5 ಹಾಗೂ ಮನೆ ಸಾಲದಲ್ಲಿ ಶೇ.69.05ಯಷ್ಟೇ ಗುರಿ ತಲುಪಲಾಗಿದೆ.ಬ್ಯಾಂಕುಗಳ ಆದ್ಯತಾ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಜಿಲ್ಲೆ ಪ್ರಗತಿ ಸಾಧಿಸುತ್ತದೆ. ಆದ್ಯತೇತರ ಕ್ಷೇತ್ರದಲ್ಲಿ ಮಾಡಿ ರುವ ಶೇ.157 ಸಾಧನೆಯಲ್ಲ. ಆದ್ದರಿಂದ ಬ್ಯಾಂಕುಗಳು ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಇನ್ನು ಮುಂದೆ ಆದ್ಯತಾ ರಂಗಕ್ಕೆ ವಿಶೇಷ ಪ್ರಾದಾನ್ಯತೆಯನ್ನು ನೀಡಬೇಕು ಎಂದವರು ಸ್ಪಷ್ಟ ನಿರ್ದೇಶನ ನೀಡಿದರು.
ಬ್ಯಾಂಕುಗಳು ಜನಸ್ನೇಹಿಯಾಗಬೇಕು: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ರಾಷ್ಟ್ರೀಕೃತ ಬ್ಯಾಂಕು ಗಳು ಪರಿಣಾಮಕಾರಿಯಾಗಿ ಕೆಲಸ ಮಾಡು ಜೊತೆಗೆ ಜನಸ್ನೇಹಿಯಾಗಿರಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳಡಿ ಆರ್ಥಿಕ ನೆರವು ಸೌಲಭ್ಯಗಳು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಿಗುವಂತಾಗಬೇಕು. ಪ್ರಧಾನಮಂತ್ರಿ ಜೀವನಜ್ಯೋತಿ, ಸುರಕ್ಷಾ ಭೀಮಾ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳು ಲಾಭ ಪಡೆಯುವಂತಾಗಬೇಕು. ಶೈಕ್ಷಣಿಕ ಯೋಜನೆಗಳಿಗೆ ಸಾಲ ನೀಡುವ ನಿಯಮಗಳು ಸರಳೀಕರಣ ಆಗಬೇಕು ಎಂದ ಅವರು, ಸರಕಾರದ ವಿವಿಧ ಯೋಜನೆ ಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆ ಯೋಜನೆಯ ಲಾಭಗಳು ಸಿಗಬೇಕು. ಇಲಾಖೆ ಆಯ್ಕೆ ಮಾಡಿ ಕಳುಹಿಸಿದ ಅರ್ಜಿಗಳು ತಿರಸ್ಕೃತವಾಗದಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕ್‌ಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ಕನ್ನಡ ಭಾಷೆಯನ್ನು ಬಳಕೆ ಮಾಡಬೇಕು. ಒಂದೊಮ್ಮೆ ಅಧಿಕಾರಿಗಳು ವ್ಯವಹರಿಸಲು ಅನಾನುಕೂಲ ವಾದಾಗ ಸ್ಥಳೀಯ ವ್ಯಕ್ತಿಗಳನ್ನು ನಿಯೋಜಿಸಬೇಕು. ಪಿ.ಎಂ.ಮುದ್ರಾ, ಸ್ಟಾರ್ಟ್‌ಅಪ್ ಯೋಜನೆ ಗಳಿಗೆ ಹೆಚ್ಚು ಆದ್ಯತೆ ನೀಡಿದಲ್ಲಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ಹೊಂದುವವರ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಆರ್ಥಿಕ ಪ್ರಗತಿ ಹೆಚ್ಚಾಗಲಿದೆ ಎಂದರು.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಸಾಲ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇದನ್ನು ಮೊದಲನೇ ಸ್ಥಾನಕ್ಕೆ ತರುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಲೀಡ್ ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಹಾಗೂ ಎಜಿಎಂ ತದಿನಾಡ ಶ್ರೀನಾಗ ಪೂರ್ಣಾನಂದ ಅವರು ಜಿಲ್ಲೆಯಲ್ಲಿ ಬ್ಯಾಂಕುಗಳ ಕಳೆದ ಸಾಲಿನ ಪ್ರಗತಿಯ ವಿವರಗಳನ್ನು ವರದಿಯಲ್ಲಿ ನೀಡಿದರು. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಜಿಲ್ಲೆಯ ಬ್ಯಾಂಕುಗಳ ಠೇವಣಿ-ಸಾಲ ಅನುಪಾತ ಶೇ.46.94 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.47.68ರಷ್ಟಾಗಿ ಶೇ.0.74ರಷ್ಟು ಏರಿಕೆಯಾಗಿದೆ. ರಾಜ್ಯದ ಅನುಪಾತ ಶೇ.77.25 ಇದ್ದು, ಉಡುಪಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಸಿ.ಡಿ.ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕ್‌ಗಳು ಕಾರ್ಯಪ್ರವೃತ್ತವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಜಿಲ್ಲಾ ಸಾಲ ಯೋಜನೆಯ ವರದಿಯನ್ನು ಪ್ರತೀಕ್ ಬಾಯಲ್ ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ನಬಾರ್ಡ್‌ನ ಡಿ.ಡಿ.ಎಂ ಸಂಗೀತಾ ಕಾರ್ತಾ, ರಿವರ್ಸ್ ಬ್ಯಾಂಕಿನ ಬೆಂಗಳೂರು ವಲಯದ ಅಲೋಕ್ ಸಿನ್ಹಾ, ರಾಜೇಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.







