ತಪ್ಪು ವೈದ್ಯಕೀಯ ವರದಿ: ಪರಿಹಾರ ನೀಡಲು ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ

ಉಡುಪಿ, ಜೂ.20: ವ್ಯಕ್ತಿಯೊಬ್ಬರಿಗೆ ಹೆಪಟೈಟಸ್ ಸಿ ಎಂದು ತಪ್ಪು ವರದಿ ನೀಡಿ ವಿದೇಶದಲ್ಲಿನ ಉದ್ಯೋಗ ವಂಚಿತರನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯ 13,49,851 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಸ್ಟಾಫ್ ನರ್ಸ್ ಆಗಿರುವ ಶಿವಕುಮಾರ್ ಶೆಟ್ಟಿಗಾರ್ ಸೌದಿ ಅರೇಬಿಯಾದಲ್ಲಿ ಯುನೈಟೆಡ್ ಮೆಡಿಕಲ್ ರೆಸ್ಪಾನ್ಸ್ ಕಂಪೆನಿಯಲ್ಲಿ ಇಂಡಸ್ಟ್ರಿಯಲ್ ನರ್ಸ್ ಆಗಿ ಆಯ್ಕೆ ಯಾಗಿದ್ದರು. ಉದ್ಯೋಗ ಪ್ರಕ್ರಿಯೆ ನಿಮಿತ್ತ ಮಂಗಳೂರಿನಲ್ಲಿರುವ ನ್ಯಾಷನಲ್ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೊಸ್ಟಿಕ್ ಸೆಂಟರ್‌ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೆಪಟೈಟಿಸ್ ಸಿ ಎಂದು ಸುಳ್ಳು ವರದಿ ನೀಡಿದ ಪರಿಣಾಮ ಇವರು ವಿದೇಶಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.
ಇದರಿಂದಾಗಿ ಇವರು 3 ವರ್ಷಗಳ ಅವಧಿಯ ಮಾಸಿಕ 82,584 ರೂ.ಗಳ ಸಂಭಾವನೆ ಪಡೆಯುವ ಅವಕಾಶ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಎದುರುದಾರರ ವಿರುದ್ಧ ದೂರು ದಾಖಲಿಸಿದ್ದರು. ಉಚಿತ ವಸತಿ, ಉಚಿತ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಸೇರಿ 36,43,560 ರೂ.ಗಳನ್ನು ಶೇ.15 ಬಡ್ಡಿಯೊಂದಿಗೆ ಮರುಪಾವತಿಸುವಂತೆ ಮತ್ತು ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಪರಿಹಾರವಾಗಿ 2 ಲ.ರೂ.ಗಳನ್ನು ಮತ್ತು ವ್ಯಾಜ್ಯದ ಖರ್ಚು 3000ರೂ.ಗಳನ್ನು ಪಾವತಿಸುವಂತೆ 2024ರಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು ಎದುರುದಾರರಾದ ನ್ಯಾಷನಲ್ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೊಸ್ಟಿಕ್ ಸೆಂಟರ್ ಮಾಲಕರಿಂದ ಸೇವಾ ನ್ಯೂನತೆ ಸ್ಪಷ್ಟವಿದ್ದರಿಂದ 13,49,851 ರೂ.ಗಳನ್ನು ಶಿವಕುಮಾರ್ ಅವರಿಗೆ ನೀಡಬೇಕು. ಮಾನಸಿಕ ಹಿಂಸೆಗೆ ಪರಿಹಾರವಾಗಿ 25,000 ರೂ.ಮತ್ತು ವ್ಯಾಜ್ಯದ ಖರ್ಚು 10ಸಾವಿರ ರೂ.ಗಳನ್ನು ಆದೇಶ ಪ್ರತಿ ತಲುಪಿದ 45 ದಿನಗಳ ಒಳಗೆ ಪಾವತಿಸುವಂತೆ ಜೂ.31ರಂದು ಆದೇಶಿಸಿದೆ. ದೂರುದಾರರ ಪರವಾಗಿ ಪ್ರದೀಪ್ ಪಿಜೆ ಮತ್ತು ಸ್ಯಾಂಪ್ರ ಅನ್ಸಿಲಾ ಡಿಸೋಜಾ ವಾದಿಸಿದ್ದರು.







