ಕಾರಂತರಿಂದ ಸ್ತ್ರೀ ಸಮಾನತೆಯ ಸಮರ್ಥ ಪ್ರತಿಪಾದನೆ: ಎಡಿಸಿ ಅಬೀದ್

ಉಡುಪಿ: ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು ಬರೆಯುತಿದ್ದ ಕಾಲದಲ್ಲಿ ನಮ್ಮ ಸಮಾಜದಲ್ಲಿ ಮಹಿಳಾ ಅಸಮಾನತೆ ಹೆಚ್ಚಾಗಿತ್ತು. ಆದರೂ ಅವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳೇ ಪ್ರಧಾನವಾಗಿರುತ್ತದೆ. ಅವರ ಚೋಮನಗುಡಿ ಕಾದಂಬರಿಯ ಬೆಳ್ಳಿ ಇದಕ್ಕೆ ಒಳ್ಳೆಯ ಉದಾಹರಣೆ. ಅಂದಿನ ಮಹಿಳೆಯರ ಸಾಮಾಜಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕಾರಂತರ ಬರವಣಿಗೆ ಸಹಕಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದ್ದಾರೆ.
ಅಜ್ಜರಕಾಡಿನಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಹಯೋಗದಲ್ಲಿ ಇಂದು ಆಯೋಜಿಸಲಾದ ‘ಡಾ.ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀಸಂವೇದನೆ’ ಎಂಬ ವಿಷಯದ ಕುರಿತ ಒಂದು ದಿನದ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಮಹಿಳಾ ಅಸಮಾನತೆಯ ಸಂಕೀಣ ಸಮಸ್ಯೆಗಳನ್ನು ಕಾರಂತರು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸ್ಥಾಪಕ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಕಾರಂತರು ತಮಗೆ ನೀಡಿದ ಮಾರ್ಗದರ್ಶನವನ್ನು ನೆನಪಿಸಿದರು.ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘ ಕಾರ್ಯದರ್ಶಿ ಡಾ.ಸುಮಾ ಎಸ್. ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿ ಮತ್ತು ಭಾಷಾಂತರ ತಜ್ಞೆ ಡಾ. ಪಾರ್ವತಿ ಜಿ. ಐತಾಳ್, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ, ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ನಿಕೇತನ, ಟ್ರಸ್ಟಿನ ಸದಸ್ಯರಾದ ಚೇತನ್ ಕೋವಾಡಿ, ಡಾ.ಪ್ರಸಾದ್ ರಾವ್, ಜಿ.ಎಂ ಶರೀಫ್ ಹೂಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರೆ, ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿನ ಸದಸ್ಯ ಸತೀಶ್ ಕೊಡವೂರು ವಂದಿಸಿದರು.







