ಮೈಸೂರು ವಿಭಾಗ ಮಟ್ಟದ ಯುವ ಕವಿಗೋಷ್ಠಿ

ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಾಸನದಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಉಡುಪಿಯ ಯುವ ಬರಹಗಾರ ರಾಮಾಂಜಿ ನಮ್ಮಭೂಮಿ ‘ಜಾತ್ರೆಯ ಹಿಂದೆ ಮುಂದೆ’ ಕವನ ವಾಚಿಸಿದರು.
ರಾಮಾಂಜಿ ತಮ್ಮ ಕವಿತೆಯಲ್ಲಿ ಜಾತ್ರೆಯನ್ನು ಒಂದು ರೂಪಕವಾಗಿ ಬಳಸಿಕೊಂಡು ಮಾನವ ಜೀವನದ ತಾತ್ಕಾಲಿಕ ಸಂಭ್ರಮ, ಅದರ ಹಿನ್ನೆಲೆಯ ಆಂತರಿಕ ಶೂನ್ಯತೆ, ಸಮಾಜದ ವಿಷಮತೆಗಳನ್ನು ಚಿತ್ರಿಸಿದರು.
ಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಫಾತಿಮಾ ರಲಿಯಾ ವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ರಿಜಿಸ್ಟ್ರಾರ್ ಕರಿಯಪ್ಪ ಎನ್., ಸದಸ್ಯರಾದ ಡಾ.ಜಯಪ್ರಕಾಶ್ ಶೆಟ್ಟಿ, ಸುಜಾತ ಎಚ್.ಆರ್., ಡಾ. ಚಂದ್ರ ಕಿರಣ್ ಕುಳವಾಡಿ, ಕಸಾಪ ಹಾಸನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಮೈಸೂರು ವಿಭಾಗದ ಆರು ಜಿಲ್ಲೆಗಳಿಂದ ಒಟ್ಟು 16 ಉದಯೋನ್ಮುಖ ಕವಿಗಳು ಭಾಗವಹಿಸಿ ಕವಿತೆಗಳನ್ನು ವಾಚಿಸಿದರು.







