ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ: ಸಿಟಿ ರವಿ

ಉಡುಪಿ, ಜೂ.30: ರಾಜ್ಯದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ. ಹಾಲಿ ರಾಜ್ಯಾಧ್ಯಕ್ಷರು ಅಧಿಕಾರದಲ್ಲಿದ್ದಾ. ಪ್ರಜಾಪ್ರಭುತ್ವದಲ್ಲಿ ಆಕಾಂಕ್ಷಿಗಳಿರುವುದು ಸಾಮಾನ್ಯ. ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ. ಹುದ್ದೆ ಅಂದರೆ ಜವಾಬ್ದಾರಿ, ಅದನ್ನು ಕೇಳಿ ಪಡೆದುಕೊಳ್ಳುವುದು ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಸುರ್ಜೇ ವಾಲಾ ರಾಜ್ಯಕ್ಕೆ ಭೇಟಿ ನೀಡಿರುವುದು ಜನರ ಕಷ್ಟ ಕೇಳಲು ಅಲ್ಲ. ಬದಲು ಅವರು ಕಪ್ಪ ಕೇಳುವುದಕ್ಕೆ ಬಂದಿದ್ದಾರೆ. ಕಪ್ಪ ಕೊಡುವುದು ಕಾಂಗ್ರೆಸ್‌ನ ವಾಡಿಕೆ. ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕೊಡದಿದ್ದರೆ ಅಧಿಕಾರದಲ್ಲಿದ್ದವರು ಪದಚ್ಯುತಿ ಆಗುತ್ತಾರೆ. ಅಧಿಕಾರದಲ್ಲಿ ಉಳಿದುಕೊಳ್ಳಲು ಕಪ್ಪಕೊಡಬೇಕು. ಅದಕ್ಕಾಗಿ ಸುರ್ಜೆವಾಲ ರಾಜ್ಯ ಪ್ರವಾಸ ಮಾಡಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ಈಶ್ವರಪ್ಪ ಬಿಜೆಪಿ ಸೇರ್ಪಡೆ ವಿಚಾರದ ಕುರಿತ ಪ್ರಶ್ನೆಗೆ, ಅವರು ಬಿಜೆಪಿ ಉಚ್ಛಾಟಿತರು. ನಾನು ಅವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣದ ಬಗ್ಗೆ ಸಂಶೋಧನೆ ಆಗಬೇಕು. ಅದಕ್ಕೆ ರಾಜ್ಯ ಆರೋಗ್ಯ ಸಚಿವರು ತಜ್ಞರ ತಂಡ ರಚಿಸಿ ಸಂಶೋಧನೆ ಮಾಡಿಸಿ ವರದಿ ಪಡೆದುಕೊಳ್ಳಬೇಕು. ಆ ವರದಿ ಬಗ್ಗೆ ಅಧೀವೇಶನ ದಲ್ಲಿ ಚರ್ಚೆ ಆಗಬೇಕು ಎಂದು ಸಿಟಿ ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ್ ಗುಂಟಿಹೊಳೆ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.







