ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನದ ಗೌರವ ಪುರಸ್ಕಾರ ಪ್ರದಾನ

ಉಡುಪಿ: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ವೈದರ ದಿನ, ಲೆಕ್ಕ ಪರಿಶೋಧಕರ ದಿನ ಹಾಗೂ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಾಧಕರಿಗೆ ಗೌರವ ಪುರಸ್ಕಾರ ಕಾರ್ಯ ಕ್ರಮ ಮಂಗಳವಾರ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಜರಗಿತು.
ವೈದ್ಯರಾದ ಡಾ.ಅಶೋಕ್ ಕುಮಾರ್ ವೈ.ಜಿ. ಹಾಗೂ ಡಾ.ಛಾಯಾಲತ ಅವರಿಗೆ ಮಲಬಾರ್ ವಿಶ್ವ ವೈದ್ಯ ಪುರಸ್ಕಾರ, ಲೆಕ್ಕಪರಿಶೋಧಕರಾದ ಕೆ.ಸುರೇಂದ್ರ ನಾಯಕ್ ಹಾಗೂ ಪಿ.ಚಂದ್ರ ಮೋಹನ್ ಹಂದೆ ಅವರಿಗೆ ಮಲಬಾರ್ ವಿಶ್ವ ಲೆಕ್ಕ ಪರಿಶೋಧಕ ಪುರಸ್ಕಾರ ಮತ್ತು ಪತ್ರಕರ್ತರಾದ ಸುಭಾಷ್‌ಚಂದ್ರ ವಾಗ್ಳೆ ಹಾಗೂ ನಝೀರ್ ಪೊಲ್ಯ ಅವರಿಗೆ ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಲ್ ಮಾತನಾಡಿ, ಪ್ರತಿದಿನ ಹೊಸತನ್ನು ತಿಳಿಯಲು, ಕಲಿಯುವ ನಿಟ್ಟಿನಲ್ಲಿ ನಾವು ಬದುಕಿನುದ್ದಕ್ಕೂ ನಾವು ನಿರಂತರ ವಿದ್ಯಾರ್ಥಿಗಳಾಗಬೇಕು. ದಾನದಿಂದ ಸಿಗುವ ತೃಪ್ತಿ ಬದುಕಿನ ಶ್ರೇಷ್ಠ ಅಂಶ ಎಂದು ತಿಳಿಸಿದರು.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಮಾತನಾಡಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಮುಖ್ಯಸ್ಥ ಹಫೀಸ್ ರೆಹಮಾನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.
ಗೌರವ ಪುರಸ್ಕಾರ ಸಮಿತಿಯ ಸಂಚಾಲಕ ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಾರ್ದನ ಕೊಡವೂರು ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ವಂದಿಸಿದರು.







