ಬ್ರಹ್ಮಾವರ ವಾರಂಬಳ್ಳಿ ಪಂಚಾಯತ್ ಅವ್ಯವಸ್ಥೆಗಳ ಆಗರ: ಕ್ರಮಕ್ಕೆ ಆಗ್ರಹ

ಬ್ರಹ್ಮಾವರ, ಜು.2: ವಾರಂಬಳ್ಳಿ ಗ್ರಾಮ ಪಂಚಾಯತ್ ಸಂತೆ ಮಾರ್ಕೆಟ್ ಸಮಸ್ಯೆ, ದುರ್ನಾತ ಬೀರುವ ಸಾರ್ವಜನಿಕ ಶೌಚಾಲಯ ಮತ್ತು ತ್ಯಾಜ್ಯ ಕಸದ ರಾಶಿಗಳು, ಕೊಳಚೆ ನೀರು ಹರಿಯುವ ಈ ಗುಂಡಿ ಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಾರಂಬಳ್ಳಿ ಪಂಚಾಯತ್‌ನ ಸಂತೆ ಮಾರ್ಕೆಟ್‌ನ ಒಳಗೆ ವಿದ್ಯುತ್ ದೀಪದ ವ್ಯವಸ್ಥೆಯೇ ಇಲ್ಲ. ಸಾರ್ವಜನಿಕ ಹರಾಜಿನಲ್ಲಿ ಸುಮಾರು ಹತ್ತು ಲಕ್ಷ ರೂ. ಹರಾಜು ಆದ ತರಕಾರಿ ಸಂತೆ ಮಾರುಕಟ್ಟೆಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನೇ ಒದಗಿಸಿಲ್ಲ. ಹಾಗೆಯೇ ಮೀನು ಮಾರುಕಟ್ಟೆ ಸುಮಾರು 1.35ಲಕ್ಷ ರೂ. ಮೊತ್ತಕ್ಕೆ ಹರಾಜಾಗಿದ್ದು, ಮಟನ್ ಮಾರುಕಟ್ಟೆ ಸುಮಾರು 4 ಲಕ್ಷ ರೂ.ಗೆ ಹರಾಜಾಗಿದೆ. ಉಳಿದ ಅಂಗಡಿ ಕೋಣೆಗಳು ಸುಮಾರು 20ಲಕ್ಷ ರೂ.ಗಳಿಗೆ ಹರಾಜಾಗಿದೆ.
ಇಷ್ಟೆಲ್ಲಾ ಆದಾಯ ಇರುವ ವಾರಂಬಳ್ಳಿ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದರೂ, ಪ್ರತೀ ತಿಂಗಳ ಪೋಲಿಸ್ ಮಾಸಿಕ ಸಭೆಯಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲ. ಸೋಮವಾರ ಸಂತೆ ನಡೆಯುವ ದಿನ ಸಂತೆ ಮಾರುಕಟ್ಟೆ ಒಳಗಡೆ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೆ ಮತ್ತು ವಾಹನ ದಟ್ಟಣೆಯಿಂದ ಹಲವು ಅಫಘಾತಗಳು ಸಂಭವಿಸುತ್ತಿವೆ.
ಸಂತೆ ನಡೆಯುವ ಸೋಮವಾರವಾದರೂ ಕನಿಷ್ಠ ಇಬ್ಬರು ಪೋಲೀಸರನ್ನು ನಿಯೋಜಿಸಿ ವಾಹನಗಳು ಮಾರುಕಟ್ಟೆ ಒಳಗಡೆ ನುಗ್ಗುವುದನ್ನು ಕಡಿಮೆ ಮಾಡಿ ಎಂದು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದಾರೆ. ಈ ಎಲ್ಲ ಅವ್ಯವಸ್ಥೆ ಹಾಗೂ ದುರವಸ್ಥೆಗಳನ್ನು ಜಿಲ್ಲಾಡಳಿತ ಆದಷ್ಟು ಬೇಗ ಸರಿಪಡಿಸ ಬೇಕೆಂದು ಬ್ರಹ್ಮಾವರ ನಾಗರಿಕ ಹೋರಾಟ ವೇದಿಕೆಯ ಸದಾಶಿವ ಶೆಟ್ಟಿ ಆಗ್ರಹಿಸಿದ್ದಾರೆ.
ವಾರಂಬಳ್ಳಿ ಸಂತೆ ಮಾರ್ಕೆಟ್ ಬಳಿ ಇರುವ ಸಾರ್ವಜನಿಕ ಶೌಚಾಲಯ ಮತ್ತು ತ್ಯಾಜ್ಯ ಕಸದ ರಾಶಿಗಳು, ಕೊಳಚೆ ನೀರು ಹರಿಯುವ ಈ ಗುಂಡಿಗಳೇ ಇಲ್ಲಿನ ಅವ್ಯವಸ್ಥೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.







