ಲಕ್ಷಾಂತರ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಜು.2: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ ಮೂರು ಪ್ರತ್ಯೇಕ ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ: ಹಿರ್ಗಾನ ಗ್ರಾಮದ ಕೀರ್ತನಾ(25) ಎಂಬವರು ಹೆಚ್ಚಿನ ಲಾಭಾಂಶಕ್ಕಾಗಿ ಜೂ.27 ಮತ್ತು 28ರಂದು ಹೂಡಿಕೆ ಮಾಡಿದ್ದ 1.45ಲಕ್ಷ ರೂ. ಹಣವನ್ನು ಅಪರಿಚಿತರು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಚಿಟ್ಪಾಡಿಯ ಹನುಮಾನ್ ಗ್ಯಾರೇಜ್‌ನಲ್ಲಿ ಕ್ಯಾರಿ ಬ್ಯಾಗ್ ವ್ಯವಹಾರವನ್ನು ನಡೆಸಿಕೊಂಡಿದ್ದ ಚಾಂತಾರು ಗ್ರಾಮದ ಲ್ಯಾನ್ಸಿ ಮಸ್ಕರೇನ್ಸ್ (47) ಎಂಬವರಿಗೆ ಮೇ 26ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಸಾಮಾಗ್ರಿಗಳನ್ನು ಪೂರೈಸುವು ದಾಗಿ ಹೇಳಿದ್ದನು. ಇದನ್ನು ನಂಬಿದ ಲ್ಯಾನ್ಸಿ ಮೇ 27 ಮತ್ತು 28ರಂದು 45,000ರೂ. ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ ಯಾವುದೇ ಸಾಮಾಗ್ರಿಗಳನ್ನು ನೀಡದೆ ಆನ್‌ಲೈನ್ ಮೂಲಕ ವಂಚನೆ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಮಣಿಪಾಲದ ವಿಘ್ನೇಶ್(30) ಎಂಬವರು ಸಾಮಾಜಿಕ ಜಾಲತಾಣದಲ್ಲಿನ ಜಾಹೀರಾತು ನೋಡಿ, ಹೆಚ್ಚಿನ ಲಾಭಕ್ಕಾಗಿ ಒಟ್ಟು 53,000ರೂ. ಆನ್‌ಲೈನ್ ಹೂಡಿಕೆ ಮಾಡಿದ್ದು, ಆದರೆ ಆರೋಪಿಗಳು ಹಣವನ್ನು ವಾಪಾಸ್ಸು ನೀಡದೆ ನಂಬಿಸಿ ವಂಚನೆ ಮಾಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





