ಬೈಂದೂರು, ಹೆಬ್ರಿಗಳಲ್ಲಿ ಭಾರೀ ಮಳೆ

ಉಡುಪಿ, ಜು.3: ಬುಧವಾರ ಅಪರಾಹ್ನ ಪ್ರಾರಂಭಗೊಂಡಿರುವ ಭಾರೀ ಮಳೆ ಉಡುಪಿ ಜಿಲ್ಲೆಯಾದ್ಯಂತ ಇಂದು ಸಹ ಮುಂದುವರಿದಿದೆ. ದಿನವಿಡೀ ಧಾರಾಕಾರ ಸುರಿಯುತ್ತಿರುವ ಮಳೆಯೊಂದಿಗೆ ಆಗಾಗ ಬಲ ವಾದ ಗಾಳಿಯೂ ಬೀಸುತ್ತಿದೆ. ಇದರಿಂದ ಜಿಲ್ಲೆಯ ಅನೇಕ ನದಿಗಳು ಮತ್ತೆ ತುಂಬಿ ಹರಿಯತೊಡಗಿವೆ.
ಬೈಂದೂರು ಹಾಗೂ ಹೆಬ್ರಿ ತಾಲೂಕುಗಳಾದ್ಯಂತ ಬಿರುಸಿನ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಬೈಂದೂರಿನಲ್ಲಿ 101.3ಮಿ.ಮೀ. ಮಳೆಯಾ ದರೆ, ಹೆಬ್ರಿಯಲ್ಲಿ 92.3ಮಿ.ಮೀ. ಮಳೆ ಬಿದ್ದಿದೆ. ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 75.2ಮಿ.ಮೀ. ಮಳೆಯಾದ ವರದಿ ಬಂದಿದೆ.
ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿ ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಮಾಹಿತಿಯೂ ಬಂದಿದೆ. ಕಾಪು ತಾಲೂಕಿನ ನಂದಿಕೂರು ಗ್ರಾಮದಲ್ಲಿ ದಿವಾಕರ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು, 70ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಸೀತಾರಾಮ ಶೆಟ್ಟಿ ಎಂಬವರ ಮನೆಗೆ ಭಾರೀ ಮಳೆಯಿಂದ ಭಾಗಶ: ಹಾನಿಯಾದರೆ, ಕಾರ್ಕಳ ತಾಲೂಕು ನಿಟ್ಟಿ ಗ್ರಾಮದ ಸುಧಾಕರ ಪೂಜಾರಿಯವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.
ಬೋಳ ಕೆರೆಕೋಡಿ ಗ್ರಾಮದ ಜಯರಾಮ ಎಂಬವರ ಅಡಿಕೆ ತೋಟಕ್ಕೆ ಸೋಮವಾರ ಸಂಜೆ ಬೀಸಿದ ಗಾಳಿಗೆ 50ಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದಿದ್ದು, 20ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿ ರುವ ಬಗ್ಗೆ ಅಂದಾಜಿಸಲಾಗಿದೆ.
ರೆಡ್ ಅಲರ್ಟ್: ಕರಾವಳಿಯ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅನಂತರದ ಎರಡು ದಿನ ಆರೆಂಜ್ ಅಲರ್ಟ್ ಇರುವುದಾಗಿ ಹೇಳಲಾಗಿದೆ. ಉಳಿದಂತೆ ಚಿಕ್ಕಮಗಳೂರು, ಶಿವಮೊಗ್ಗ ಹಾಸನ ಜಿಲ್ಲೆಗಳಲ್ಲೂ ರೆಡ್ ಅಲರ್ಟ್ ನಾಳೆ ಮುಂದುವರಿಯಲಿದೆ. ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಸೂಚನೆ ನೀಡಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಲ್ಲಿ ಮುಂದಿನ ಮೂರು ದಿನಗಳ ಕಾಲ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆಯೂ ಸುರಿಯಲಿದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.







