ವಂಡಾರು: ಕಾರ್ಮಿಕನಿಗೆ ಕಿರುಕುಳ; ಮಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ
ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬ್ರಹ್ಮಾವರ, ಜು.3: ತಾಲೂಕಿನ ವಂಡಾರು ಎಂಬಲ್ಲಿ ಕಾರ್ಯಾಚರಿಸು ತ್ತಿರುವ ಕೃಷ್ಣಪ್ರಸಾದ್ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕುಡುಬಿ ಸಮುದಾಯದ ಯುವಕನಿಗೆ ಒಂಟಿ ಕಾಲಿನಲ್ಲಿ ನಿಲ್ಲಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ, ಕುಡುಬಿ ಸಮಾಜೋದ್ಧಾರಕ ಸಂಘ, ಉಡುಪಿ ಜಿಲ್ಲೆಯ ವತಿಯಿಂದ ಗುರುವಾರ ವಂಡಾರು ಮಾವಿನಕಟ್ಟೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಈ ಫ್ಯಾಕ್ಟರಿಯಲ್ಲಿ ಇತ್ತೀಚೆಗೆ ಪ್ರವೀಣ್ ಎಂಬ ಕಾರ್ಮಿಕನಿಗೆ ಕಿರುಕುಳ ನೀಡಲಾದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದ್ದು ಆರೋಪಿ ಯಾವುದೇ ಪ್ರಭಾವ ಹೊಂದಿದ್ದರೂ ಕೂಡ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು. ಅಗತ್ಯ ಕ್ರಮ ವಹಿಸದಿದ್ದಲ್ಲಿ ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ದೂರುದಾರ ಪ್ರವೀಣ್ ಮಾತನಾಡಿ, ಫ್ಯಾಕ್ಟರಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅಂದು ಅಡಚಣೆ ಯಾಗಿದ್ದು ಈ ಬಗ್ಗೆ ಸಂಸ್ಥೆಯ ಬಳಿ ಹೋದಾಗ ನನ್ನೊಡನೆ ಅಮಾನವೀಯವಾಗಿ ವರ್ತಿಸಿದ್ದರು. ಸಂಜೆಯ ತನಕ ನನ್ನನ್ನು ನಿಲ್ಲಿಸಿದ್ದರು. ನಾನೇನು ತಪ್ಪು ಮಾಡಿಲ್ಲ. ಈ ಬಗ್ಗೆ ಠಾಣೆಗೆ ದೂರು ನೀಡಲಾಗಿದೆ ಎಂದರು.
ಕುಡುಬಿ ಸಮಾಜೋದ್ದಾರಕ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಪ್ರಭಾಕರ ನಾಯ್ಕ್ ಮಾತನಾಡಿ, ಇಲ್ಲಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ಎನ್ನುವಾತನಿಗೆ ಫ್ಯಾಕ್ಟರಿಯ ಆವರಣದೊಳಗೆ ಒಂಟಿ ಕಾಲಿನಲ್ಲಿ ನಿಲ್ಲಿಸಿದ ಬಗ್ಗೆ ಪ್ರವೀಣ ಮತ್ತು ಸಂಬಂಧಿಕರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದಾರೆ. ಪ್ರವೀಣ್ ಕುಡುಬಿ ಸಮುದಾಯಕ್ಕೆ ಸೇರಿದ್ದು, ತಾಯಿಯ ಅನಾರೋಗ್ಯದಿಂದ ಸಾಕಷ್ಟು ತೊಂದರೆ ಅನುಭ ವಿಸುತ್ತಿದ್ದು ಸಮುದಾಯ ಆತಂಕಕ್ಕೆ ಒಳಗಾಗಿದೆ. ಶೋಷಣೆಗಳು ನಿಲ್ಲಬೇಕು, ದಬ್ಬಾಳಿಕೆ ವರ್ತನೆಗೆ ತಕ್ಕ ಪಾಠವಾಗಬೇಕು. ಸಮಾಜಕ್ಕಾದ ಅನ್ಯಾಯದ ವಿರುದ್ಧ ಹೋರಾಟ ನಿರಂತರ ಎಂದರು.
ಪ್ರತಿಭಟನಾಕಾರರು ತಮ್ಮ ಹಕ್ಕೊತ್ತಾಯಗಳ ಬೇಡಿಕೆಯನ್ನು ಶಂಕರನಾರಾಯಣ ಠಾಣಾಧಿಕಾರಿ ನಾಸೀರ್ ಹುಸೇನ್ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕುಡುಬಿ ಸಮಾಜೋದ್ದಾರಕ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ರವಿ ನಾಯ್ಕ್, ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿಘ್ನೇಶ್, ಜಿಲ್ಲಾ ಕಾರ್ಯ ದರ್ಶಿ ಜಗನ್ನಾಥ್, ಮುಖಂಡರಾದ ಅಣ್ಣಪ್ಪ ನಾಯ್ಕ್ ಅಲ್ಬಾಡಿ, ಕಾಳುನಾಯ್ಕ್, ಗಣೇಶ್ ನಾಯ್ಕ್, ಸಿಐಟಿಯು ಜಿಲ್ಲಾ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ವಿ., ಕೋಶಾಧಿಕಾರಿ ಶಶಿಧರ ಗೊಲ್ಲ, ಕಟ್ಟಡ ಕಾರ್ಮಿಕ ಸಂಘಟನೆಯ ಸುಭಾಶ್ ನಾಯಕ್, ಸಯ್ಯದ್, ಚಿಕ್ಕ ಮೊಗವೀರ, ಚಂದ್ರನಾಯ್ಕ್ ಮೊದಲಾದವರಿದ್ದರು.
ಕಾರ್ಖಾನೆ ಮಾಲಕರ ಸ್ಪಷ್ಟನೆ
ಕಾರ್ಖಾನೆಗೆ ನಷ್ಟವುಂಟು ಮಾಡಿದ ಬಗ್ಗೆ ಜೂ.17ರಂದು ಮ್ಯಾನೇಜರ್ ಸಂಸ್ಥೆಯಿಂದ ವಜಾ ಮಾಡಿ ದ್ದರು. ಈ ಹಿಂದೆಯೂ ಕರ್ತವ್ಯಲೋಪ ಪ್ರವೀಣ್ ಅವರಿಂದ ನಡೆದಿತ್ತು. ಇದಾದ ಬಳಿಕ ಆತ ನನ್ನ ಭೇಟಿಯಾಗಲು ಬಂದ ದಿನ ನಡೆದಿದೆ ಎನ್ನಲಾದ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾಗಿದೆ. ಅಂದಿನ ಎಲ್ಲಾ ಘಟನೆಗಳ ಬಗ್ಗೆ ಸಿಸಿಟಿವಿ ದಾಖಲೆಗಳಿದ್ದು ತನಿಖಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಯುವಕನನ್ನು ಒಂಟಿ ಕಾಲಿನಲ್ಲಿ ನಿಲ್ಲಿಸಲಾಗಿದೆ ಎಂಬುದು ಸುಳ್ಳು. ಮಳೆ ಬರುತ್ತಿರುವಾಗ ಆತನಿಗೆ ಕೊಡೆ ಕೂಡ ನೀಡಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸದವರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಕೆಲಸ ಬಿಟ್ಟು ಹೋದವರು ಮಾಡುತ್ತಿರುವ ನಿರಾಧಾರ ಆರೋಪ.
-ಸಂಪತ್ ಶೆಟ್ಟಿ, ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಕಾರ್ಖಾನೆಯ ಆಡಳಿತ ನಿರ್ದೇಶಕ ವಂಡಾರು.







